ಭುವನೇಶ್ವರ: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಫೆಡರೇಶನ್ ಕಪ್ ಕೂಟದ ಜಾವೆಲಿನ್ ಸ್ಪರ್ಧೆಯಲ್ಲಿ ಸ್ವರ್ಣ ಪದಕದ ಸಂಭ್ರಮ ಆಚರಿಸಿದ್ದಾರೆ. ಇದು 3 ವರ್ಷಗಳ ಬಳಿಕ ಭಾರತದ ನೆಲದಲ್ಲಿ ನೀರಜ್ ಗೆದ್ದ ಮೊದಲ ಚಿನ್ನದ ಪದಕ ಎಂಬುದು ವಿಶೇಷ.
ಬುಧವಾರದ ಜಾವೆಲಿನ್ ಸ್ಪರ್ಧೆಯಲ್ಲಿ ಹರಿಯಾಣದ ನೀರಜ್ ಚೋಪ್ರಾ 82.27 ಮೀ.ಸಾಧನೆಯೊಂದಿಗೆ ಬಂಗಾರಕ್ಕೆ ಗುರಿ ಇರಿಸಿದರು. ಅವರ ಈ ಗರಿಷ್ಠ ದೂರ 4ನೇ ಸುತ್ತಿನಲ್ಲಿ ದಾಖಲಾಯಿತು. ಹೀಗಾಗಿ ಕೊನೆಯ ಸುತ್ತಿನಲ್ಲಿ ಸ್ಪರ್ಧಿಸಲಿಲ್ಲ. ರಾಜ್ಯದ ಡಿ.ಪಿ. ಮನು ಬೆಳ್ಳಿ ಪದಕ ಗೆದ್ದರು (82.06 ಮೀ.) ನೀರಜ್ ಚೋಪ್ರಾ 2021ರ ಮಾರ್ಚ್ 17ರಂದು ಕೊನೆಯ ಸಲ ದೇಶಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಅದು ಕೂಡ ಫೆಡರೇಶನ್ ಕಪ್ ಪಂದ್ಯಾವಳಿಯೇ ಆಗಿತ್ತು. ಅಂದು 87.80 ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಅಂದಿನ ದೂರಕ್ಕೆ ಹೋಲಿಸಿದರೆ ಭುವನೇಶ್ವರ ಕೂಟದಲ್ಲಿ ನೀರಜ್ ಸಾಧನೆ ತೀರಾ ಸಾಮಾನ್ಯ ಎಂದೇ ಹೇಳಬೇಕು.