ಬೆಂಗಳೂರು: ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಕ್ಷಣವೇ 20 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ( ಇಂಡಸ್ಟಿçಯಲ್ ಪಾರ್ಕ್)ವನ್ನು ಸ್ಥಾಪನೆ ಮಾಡಬೇಕೆಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದ್ದಾರೆವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ಯಮ ವಲಯದ ಹೆಚ್ಚುವರಿ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಸಭೆ ನಡೆಸಿದರು.
ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲಿ ಲಭ್ಯವಿರುವ ಕಡೆ ಜಮೀನುಗಳನ್ನು ಗುರುತಿಸಿ ಭೂಸ್ವಾಧೀನ ಮಾಡಿಕೊಂಡು ಕೈಗಾರಿಕಾ ಪ್ರದೇಶಗಳನ್ನು ಕನಿಷ್ಠಪಕ್ಷ 20 ಎಕರೆ ಜಾಗದಲ್ಲಿ ಸ್ಥಾಪನೆ ಮಾಡಬೇಕು ಇದರಿಂದ ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಿ, ಅದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ, ಉದ್ಯಮಿಗಳು ಮುಂದೆ ಬಂದು ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಾರೆ. ಇದರಿಂದ ಸ್ಥಳೀಯರು ಹಾಗೂ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡುವಾಗ ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಿಕೊಳ್ಳಬಾರದು. ಯಾರು ಸ್ವಯಂ ಪ್ರೇರಿತರಾಗಿ ಜಮೀನು ನೀಡಲು ಮುಂದೆ ಬರುತ್ತಾರೋ, ಅವರಿಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ಕೊಟ್ಟರು. ಮುಖ್ಯವಾಗಿ ರಸ್ತೆ ,ವಿದ್ಯುತ್, ನೀರು, ಸೇರಿದಂತೆ ಅಗತ್ಯ ವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ತಾಲೂಕು ಮಟ್ಟದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದರೆ ಉದ್ಯೋಗ ಸೃಷ್ಟಿಗೆ ಮುನ್ನುಡಿ ಬರೆದಂತೆ ಆಗುತ್ತದೆ ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಸೂಚನೆ ನೀಡಿದರು. ಲ್ಯಾಂಡ್ ಬ್ಯಾಂಕ್ ಸ್ಥಾಪಿಸಿ: ಅಗತ್ಯವಿರುವ ಕಡೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮಾಡಲು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮಾಡಿದರೆ, ಉದ್ಯಮಿಗಳು ತಮಗೆ ಬೇಕಾದ ಕಡೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಅನುಕೂಲವಾಗುತ್ತದೆ. ಜಿಲ್ಲಾ ಹಾಗೂ ತಾಲೂಕ್ ಮಟ್ಟದಲ್ಲಿ ಲಭ್ಯವಿರುವ ಜಮೀನನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಇಳಕಲ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್: ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನಲ್ಲಿ ಬಹುದಿನಗಳ ಕನಸದ ಟೆಕ್ಸ್ ಟೈಲ್ ಪಾರ್ಕನ್ನು ಆದಷ್ಟು ಶೀಘ್ರ ಸ್ಥಾಪನೆ ಮಾಡಲು ಅಧಿಕಾರಿಗಳು ವಿಶೇಷ ನಿಗವಹಿಸಬೇಕೆಂದು ಸಚಿವ ವಿಜಯಾನಂದ ಕಾಶಪ್ಪನವರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಳಕಲ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಬೇಕೆಂಬುದು ದಶಕಗಳ ಕನಸು, ಬೇರೆ ಬೇರೆ ಕಾರಣಗಳಿಂದ ಇದು ಕಾರ್ಯಗತವಾಗದೆ ಕೇವಲ ಕಾಗದದಲ್ಲೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.ವೈಯಕ್ತಿಕವಾಗಿ ತಮಗೂ ಇಳಕಲ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಗುರಿಯಿದೆ. ನನ್ನ ಅಧಿಕಾರ ಅವಧಿಯಲ್ಲಿ ಈ ಕನಸು ನನಸಾಗಬೇಕು. ಅಧಿಕಾರಿಗಳು ಕುಂಟು ನೆಪ ಹೇಳದೆ, ಆದಷ್ಟು ಶೀಘ್ರ ಇದನ್ನು ಕಾರ್ಯಗತಗೊಳಿಸಲು ಮುಂದಾಗಬೇಕೆಂದು ಸೂಚನೆ ನೀಡಿದರು.
ಇಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣವಾದರೆ ಯುವಕರಿಗೆ ಉದ್ಯೋಗ ದೊರೆಯುತ್ತದೆ. ಅಲ್ಲದೆ ಇಲ್ಲಿಂದಲೇ ದೇಶ ಮತ್ತು ವಿದೇಶಗಳಿಗೂ ಜವಳಿಯನ್ನು ರಫುö್ತ ಮಾಡಬಹುದು. ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದ್ದೇವೆ. ಮೊದಲು ಈ ಯೋಜನೆ ಕಾರ್ಯಗತವಾಗಬೇಕೆಂದು ಮಾಡಿದರು. ಇದೇ ವೇಳೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ ಎಂದು ಕೆಲವು ಅಧಿಕಾರಿಗಳು ಸಚಿವರ ಗಮನಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವ ಕಾಶಪ್ಪನವರ, ಆದಷ್ಟು ಶೀಘ್ರ ಇಲಾಖೆಯ ಸಚಿವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ಅನಗತ್ಯವಾಗಿ ತೊಂದರೆ ನೀಡದಂತೆ ಸೂಚಿಸುವುದಾಗಿ ಸಚಿವರು ಅಭಯ ನೀಡಿದರು. ಈ ಸಂದರ್ಭದಲ್ಲಿ ಎಂ ಎಸ್ ಎಂ ಈ ನಿರ್ದೇಶಕ ವೈ .ಎಸ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.