ಬೆಂಗಳೂರು: ಸ್ವಪಕ್ಷ ಆಡಳಿತ ಸರ್ಕಾರ ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಲು ಶಾಸಕರು ಮುಂದಾಗಿದ್ದಾರೆ. ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ.ಈ ಸಭೆಯಲ್ಲಿ ಪಾಲ್ಗೊಳ್ಳುವ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಮುಖಂಡರ ಸಮ್ಮುಖದಲ್ಲಿ ತೋಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯದಲ್ಲಿ 102 ತಾಲ್ಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಸುಮಾರು 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ಪರಿಸ್ಥಿತಿ ಹೀಗಿದ್ದರೂ ತಾವೂ ಪ್ರತಿನಿಧಿಸುವ ಕ್ಷೇತ್ರವನ್ನು ಬರಪಟ್ಟಿಯಿಂದ ಕೈಬಿಡಲಾಗಿದೆ. ತಾರತಮ್ಯ ದೋರಣೆ ಏಕೆ ಎಂದು ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ. ಮುಂದುವರಿದು ಗದಗ ಕ್ಷೇತ್ರದ ರೋಣ, ಗದಗ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಬರ ಹೆಚ್ಚಾಗಿದೆ. ಈ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಸರ್ಕಾರ ಮುಂದಾಗಬೇಕು ಎಂದು ಆ ಜಿಲ್ಲೆಯ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜತೆಗೆ ಆ ಜಿಲ್ಲೆಯ ಶಾಸಕರಿಬ್ಬರು ತಮ್ಮ ಜಿಲ್ಲೆಯನ್ನು ಬರ ಪಟ್ಟಿಗೆ ಸೇರಿಸದೆ ಹೋದರೆ ತಾವುಗಳು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಸರ್ಕಾರಕ್ಕೆ ತಿಳಿಸಿದ್ದಾರೆ. ತಮ್ಮ ಕ್ಷೇತ್ರವನ್ನು ಬರ ಪಟ್ಟಿಗೆ ಸೇರಿಸಲು ಮುಂದಿನ ತಿಂಗಳ 10ರವರೆಗೂ ಗಡುವು ನೀಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಅಸಮಾಧಾನಿತ ಶಾಸಕರು ಇಂದಿನ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ನೇರವಾಗಿ ಬಹಿರಂಗ ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಇದೇ ಸಭೆಯಲ್ಲಿ ನಾಳೆ ನಡೆಯುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ವಿಪಕ್ಷಗಳು ನಡೆಸುವ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ನಿನ್ನೆಯೇ ಕಂದಾಯ ಸಚಿವರಾಗಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸುಮಾರು 8 ಮಂದಿ ಸಚಿವರೊಂದಿಗೆ ಬರದ ಬಗ್ಗೆ ನಡೆಯುವ ಚರ್ಚೆಯಲ್ಲಿ ನೀಡಬೇಕಾಗಿರುವ ಸರ್ಕಾರದ ಉತ್ತರದ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.
ಈ ಎಲ್ಲಾ ವಿಷಯಗಳು ಇಂದು ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಲಿವೆ ಎನ್ನಲಾಗಿದೆ.