ಬೆಂಗಳೂರು: ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ 8 ಮಂದಿ ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಮೌಲ್ಯದ ನಗಾ ನಾಣ್ಯ ಹಾಗೂ ನಿವೇಶನಗಳಿಗೆ ಸಂಬಂಧಪಟ್ಟಹಾಗೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ ಹಾಗೂ ಮಡಿಕೇರಿ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ಹಲವೆಡೆ ಅಧಿಕಾರಿಗಳು ತಲಾಶ್ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನ ನಿವೃತ್ತ ಬಿಬಿಎಂಪಿ ಎಇಇ ರಂಗನಾಥ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
ರಾಜೇಶ್ವರಿ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಕಲಬುರಗಿ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಮನೆ ಹಾಗೂ ಕಛೇರಿ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿಯಾಗಿದೆ. ಇದುವರೆಗೂ 400ಗ್ರಾಂ ಚಿನ್ನ ಪತ್ತೆಯಾಗಿದೆ.ಹೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಹುಬ್ಬಳ್ಳಿ ಹೆಸ್ಕಾಂ ಕಚೇರಿಯಲ್ಲಿ ಎಇಇ ದಂಪತಿ ಕಿರಣ್ ಕುಮಾರ್- ಪ್ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿಯಲ್ಲಿರುವ ಮನೆ, ಕಚೇರಿ ಸೇರಿ ಒಟ್ಟು ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿಯಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ರಮೇಶ್ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ.