ಬೆಂಗಳೂರು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಸಂಬಂಧ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಸಮರವೇ ನಡೆಯುತ್ತಿವೆ. ನಿನ್ನೆ ಎಸ್‌ಐಆರ್ ಸಂಬಂಧ ರಾಜ್ಯದ ಚುನಾವಣಾಧಿಕಾರಿ ಕಚೇರಿ ಎದುರಿನಲ್ಲಿಯೇ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಶಾಸಕರು ಪ್ರತಿಭಟನಾ ಧರಣಿ ನಡೆಸಿದರು. ಇದಕ್ಕೆ ವತಿರಿಕ್ತವಾಗಿ ಬಿಜೆಪಿ, ಜೆಡಿಎಸ್‌ನವರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಆಡಳಿತ ಮಾಡುವುದಕ್ಕೆ ಶಕ್ತರಲ್ಲದೆ ಪಕ್ಷದಲ್ಲಿರುವ ಹಿರಿಯ ಶಾಸಕರ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದೆ ಮುಖ್ಯಮಂತ್ರಿಯವರು ಹತಾಶರಾಗಿದ್ದಾರೆ. ಅದಕ್ಕಾಗಿ ಜನರ ಗಮನವನ್ನು ಬೇರೆಡೆ ತಿರುಗಿಸಲು ಈ ರೀತಿಯಾದ ಕ್ರಮವನ್ನು ಅನುಸರಿಸುತ್ತಿದ್ದಾರೆ. ಪಕ್ಷದ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಬಿ.ಆರ್. ಪಾಟೀಲ್, ಎಚ್.ಕೆ. ಪಾಟೀಲ್ ಮೊದಲಾದವರು ತೀವ್ರವಾಗಿ ಅಸಮಾಧಾನಗೊಂಡು ತಮ್ಮ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿರುವುದರಿಂದ ವಿಚಲಿತರಾಗಿರುವ ಡಿ.ಕೆ.ಶಿವಕುಮಾರ್ ವಿಪಕ್ಷ ಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ತಮ್ಮ ಪಕ್ಷ ಬಿಜೆಪಿ ವಿರುದ್ದ ತಾವು ಮಾಡಿರುವ ಆರೋಪಕ್ಕೆ ನೇರವಾಗಿ ದಾಖಲೆ ಸಮೇತ ಸಾಬೀತು ಮಾಡಲಿ ಇಲ್ಲವಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಆರಂಭದಲ್ಲಿ ಎಸ್‌ಐಆರ್‌ಅನ್ನು ಅಕ್ರಮವಾಗಿ ನಡೆಸಿದ್ದೇ ಕಾಂಗ್ರೆಸ್ ಪಕ್ಷ. ಇದೀಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ದೂರಿದಿದ್ದಾರೆ. ಮೈಸೂರಿನಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕರಾಗಿರು ಮಾಜಿ ಸಚಿವ ತನ್ವರ್ ಸೇಠ್ ಮಾತನಾಡಿ, ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ನಿಂದಲೇ ಫಾರಂ7 ಮುದ್ರಣವಾಗುತ್ತಿದೆ ಎಂದು ಆರೋಪಿಸಿ ತಮ್ಮ ಕ್ಷೇತ್ರದ ಪ್ರತಿಯೊಂದು ಬೂತ್‌ಗೂ 100-150 ಮತದಾರರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಚಿಕ್ಕಮಗಳೂರು ಕಡೆಯಿಂದ ಬರುವವರೇ ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಯ ಸಿ.ಟಿ.ರವಿ ಅವರ ಹೆಸರನ್ನು ಹೇಳಲದೆ ಆಕ್ಷೇಪ ವ್ಯಕ್ತಪಡಿಸಿದರು.
ಇದುವರೆಗೂ ನರಸಿಂಹರಾಜ ಕ್ಷೇತ್ರದಲ್ಲಿ 10ಸಾವಿರಕ್ಕೂ ಹೆಚ್ಚು ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ತಮಗೆ ಬೇಕಾದವರನ್ನು ಬಿಜೆಪಿ ಅವರು ಸೇರ್ಪಡೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಎಲ್ಲದರ ನಡುವೆ ಮಧ್ಯಾಹ್ನ 12 ಗಂಟೆ ವೇಳೆಗೆ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಛಲವಾದಿ ನಾರಾಯಣಸ್ವಾಮಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ನಿನ್ನೆ ಕಾನೂನು ಬಾಹಿರವಾಗಿ ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆಸಿದ ಧರಣಿ ಬಗ್ಗೆ ದೂರು ನೀಡಿ ಕ್ರಮ ಜರುಗಿಸುವಂತೆ ಒತ್ತಾಯಿಸಲಿದ್ದಾರೆ.ಒಟ್ಟಾರೆ ಎಸ್‌ಐಆರ್ ಪ್ರಕ್ರಿಯೆ ರಾಜಕೀಯ ಆಟ ಮೇಲಾಟಗಳ ಸಮರಕ್ಕೆ ವೇದಿಕೆಯಾಗಿದೆ.