ಬೆಂಗಳೂರು: ನಿನ್ನೆ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳಲು ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿಯೇ ಇಂದು ರಾಜಕಾರಣ ನಡೆಸುತ್ತಿದ್ದಾರೆ.ನಿನ್ನೆ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ನಂತರ ಇಂದು ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು, ರಾಜ್ಯ ವಿಧಾನ ಪರಿಷತ್‌ಗೆ ಸದಸ್ಯರ ನೇಮಕ ಮಾಡುವ ಸಂಬಂಧ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಸಂಬಂಧವೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸಂಪುಟ ಪುನಃರಚನೆಯಾದ ನಂತರ ಸಚಿವ ಸ್ಥಾನ ವಂಚಿತರಿಗೆ ಆದಷ್ಟು ಬೇಗ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗುವುದು ಎಂದು ಹೇಳಲಾಗುತ್ತಿತ್ತು.ಆದರೆ ಬಹಳ ದಿನಗಳ ಕಾಲ ಕಳೆದರೂ ಈ ಪ್ರಕ್ರಿಯೆ ನಡೆಯದ ಕಾರಣ ಸಿದ್ದರಾಮಯ್ಯ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.