ಕೆ.ಆರ್.ನಗರ: ಜಿಲ್ಲಾ ಮಟ್ಟದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಏ.23ರ ಗುರುವಾರದಂದು ಮೈಸೂರಿನಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಹೇಳಿದರು.
ಪಟ್ಟಣದ ಉಪ್ಪಾರ ಶ್ರೀರಾಮ ಮಂದಿರದಲ್ಲಿ ಶ್ರೀ ಭಗೀರಥ ಜಯಂತ್ಯೋತ್ಸವ ಕಾರ್ಯಕ್ರಮದ ಪೋಸ್ಟರ್ ಹಾಗೂ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಉಪ್ಪಾರ ಸಮಾಜದ ಮೂಲ ಕಸುಬಾದ ಉಪ್ಪು ತಯಾರಿಕೆಯನ್ನು ಬಿಂಬಿಸುವ ಉಪ್ಪಿನ ರಾಶಿ ಮತ್ತು ಗಂಗಾ ಕಳಸ ಪೂಜೆಯನ್ನು ಮಾಡಿ ಪುಷ್ಪಾರ್ಚನೆಯೊಂದಿಗೆ “ಶ್ರೀ ಭಗೀರಥ ಮಹರ್ಷಿ” ಅವರ ಭಾವಚಿತ್ರವನ್ನು ಭವ್ಯವಾಗಿ ಅಲಂಕೃತಗೊಂಡ ವಾಹನದಲ್ಲಿ ಪ್ರತಿಷ್ಠಾಪಿಸಿ ಸತ್ತಿಗೆ, ಸುರಿಪಾಣಿ, ಮಾರಿಕುಣಿತ, ಬೀಸು ಕಂಸಾಳೆ, ಡೊಳ್ಳು ವರಸೆ ಸೇರಿದಂತೆ ವಿವಿಧ ಕಲಾತಂಡಗಳೊAದಿಗೆ ಮೈಸೂರಿನ ಅರಮನೆ ಮುಂಭಾಗವಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರಕ್ಕೆ ಕರೆತರಲಾಗುವುದು. ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.ಸೂರ್ಯವಂಶ ಕ್ಷತ್ರಿಯರ ಅನುವಂಶಿಯರಾದ ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು ಲೋಕ ಕಲ್ಯಾಣಾರ್ಥವಾಗಿ ಮನುಕುಲದ ಉದ್ಧಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ. ಈ ಸಾಧನೆಯು ಭಗೀರಥ ಪ್ರಯತ್ನ ಎಂದು ಪ್ರಖ್ಯಾತಿ ಹೊಂದಿರುತ್ತದೆ. ಶ್ರೀ ಭಗೀರಥ ಮಹರ್ಷಿಯವರ ಜಯಂತಿಯನ್ನು ಸರ್ಕಾರದ ವತಿಯಿಂದ ರಾಜ್ಯಾದ್ಯಂತ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿ ಜಿಲ್ಲಾ ಆಡಳಿತದೊಂದಿಗೆ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಕೈಜೋಡಿಸಿ ಮೈಸೂರು ಜಿಲ್ಲಾಮಟ್ಟದಲ್ಲಿ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಏ.23ರ ಗುರುವಾರದಂದು ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿAದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಾಪುರ ನಾಗರಾಜು ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗದ ಭಗೀರಥ ಪೀಠದ ಡಾ. ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಹಾಗೂ ಮಳವಳ್ಳಿಯ ಅಯ್ಯನ ಸರಗೂರು ಮಠದ ಶ್ರೀ ಮಹದೇವಸ್ವಾಮಿಗಳು ವಹಿಸಲಿದ್ದು, ಸಚಿವರು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಸೇರಿದಂತೆ ಹಲವು ಗಣ್ಯರುಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಶ್ರೀ ಭಗೀರಥ ಜಯಂತೋತ್ಸವ ಕಾರ್ಯ ಕ್ರಮದಲ್ಲಿ ಜಿಲ್ಲೆಯ ಎಲ್ಲಾ ಭಾಗದ ಉಪ್ಪಾರ ಸಮಾಜದ ಯಜಮಾನರುಗಳು, ಜನಪ್ರತಿನಿಧಿಗಳು, ಮುಖಂಡರು, ಸಂಘಟನೆಗಳವರು, ಯುವಕರು, ಮಹಿಳೆಯರು, ನೌಕರರು, ವೃತ್ತಿಪರರು ಸೇರಿದಂತೆ ಸರ್ವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಹೊರತಂದಿರುವ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕನಕನಗರ ಮಹದೇವ್, ಜಿಲ್ಲಾ ಉಪ್ಪಾರ ಸಂಘದ ಮಹಿಳಾ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ವಿಜಯಕುಮಾರಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕಾಟ್ನಾಳು ಮಹದೇವ, ಉಪಾಧ್ಯಕ್ಷ ರಾಮಕೃಷ್ಣ, ಖಜಾಂಚಿ ಟಿ.ಡಿ.ರವಿಕುಮಾರ್, ನಗರಾಧ್ಯಕ್ಷ ಟಿ.ಕೃಷ್ಣ, ಕಾರ್ಯದರ್ಶಿ ರಂಗರಾಜು, ಯಜಮಾನ ಕೇಶವಮೂರ್ತಿ, ಪುರಸಭಾ ಮಾಜಿ ಸದಸ್ಯ ಎಸ್.ಯೋಗಾನಂದ, ಮುಖಂಡರುಗಳಾದ ಪ್ರದೀಪ್, ಶ್ರೀನಿವಾಸ್, ಮಂಜುನಾಥ, ರಾಮಚಂದ್ರ, ಸತೀಶ್, ಮುದುಗುಪ್ಪೆ ಕುಮಾರ್, ಟಿ.ಎನ್.ಯೋಗೇಶ್ ಕುಮಾರ್, ಜವರಶೆಟ್ಟಿ, ಕುಡ್ಲಾಪುರ ರಾಜು, ನಾಗರಾಜು, ಮಂಜುನಾಥ್, ರವಿಕುಮಾರ್ ಸೇರಿದಂತೆ ಹಲವರು ಇದ್ದರು.
ಶ್ರೀಭಗೀರಥ ಮಹರ್ಷಿ ಜಯಂತಿ ಪೋಸ್ಟರ್-ಕರ ಪತ್ರಗಳ ಬಿಡುಗಡೆ



