ಮೇಲುಕೋಟೆ: ಭಾರತದ ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಶ್ರೀಚೆಲುವನಾರಾಯಣಸ್ವಾಮಿಯವರ ವೈರಮುಡಿ ಕಿರೀಟಧಾರಣಮಹೋತ್ಸವ ಮಾರ್ಚ 21ರ ಗುರುವಾರ ರಾತ್ರಿ 8ಗಂಟೆಗೆ ಆರಂಭವಾಗಲಿದ್ದು ಬೆಳಗಿನ 3 ಗಂಟೆಯವರೆಗೆ ನಡೆಯಲಿದೆ.
ಹತ್ತು ದಿನಗಳ ಬ್ರಹ್ಮೋತ್ಸವದಲ್ಲಿ ನಾಲ್ಕನೆ ತಿರುನಾಳ್ ದಿನವಾದ ಮಾ.21 ರ ಗುರುವಾರ ರಾತ್ರಿ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ರಾತ್ರಿ 8ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆರಂಭವಾಗಲಿದೆ.
ತಡರಾತ್ರಿ ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರಖಚಿತ ರಾಜಮುಡಿ ಉತ್ಸವ ನೆರವೇರಲಿದೆ ಭಾರತದಲ್ಲಿ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟತೊಂಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಬ್ರಹ್ಮೋತ್ಸವದ ಪ್ರಮುಖ ಉತ್ಸವಗಳು: ವೈರಮುಡಿ ಜಾತ್ರಾಮಹೋತ್ಸವ ಮಾರ್ಚ16 ರ ಅಂಕುರಾರ್ಪಣದೊಂದಿಗೆ ಆರಂಭವಾಗಿ ಮಾರ್ಚ 28 ರ ಶೇರ್ತಿಸೇವೆಯವರೆಗೆ 13 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಮಾ.24 ರ ಭಾನುವಾರ ನಡೆಯುವ ಮಹಾರಥೋತ್ಸವ 25 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ 26 ರಂದು ಬೆಳಿಗ್ಗೆ 11 ಗಂಟೆಗೆ ತೀರ್ಥಸ್ನಾನ ಸಂಜೆ 5ಗಂಟೆಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳಾಗಿವೆ
ಇದನ್ನು ಹೊರತುಪಡಿಸಿದರೆ ಮಾರ್ಚ 17 ರಂದು ಸಂಜೆ 5 ಗಂಟೆಗೆ ಕಲ್ಯಾಣಿಯಧಾರಾಮಂಟಪದಲ್ಲಿ ಕಲ್ಯಾಣೋತ್ಸವ ಮಾ.18 ರಂದು ಬೆಳಿಗ್ಗೆ 9 ಗಂಟೆಗೆ ದ್ವಜಾರೋಹಣ, 19 ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ 20 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ 22 ರ ಪ್ರಹ್ಮಾದ ಪರಿಪಾಲನೋತ್ಸವ 23 ರಂದು ರಾತ್ರಿ ಗಜೇಂದ್ರಮೋಕ್ಷ ಉತ್ಸವ 27 ರಂದು ನಡೆಯುವ ಮಹಾಭಿಷೇಕ ಮಹೋತ್ಸವಗಳು ವಿಶೇಷ ಉತ್ಸವಗಳಾಗಿದೆ.
ಸ್ವಾಮಿಗೆ ವಾಹನೋತ್ಸವ ವೈಭವ: ವಿಶೇಷ ಉತ್ಸವಗಳ ಜೊತೆಗೆ ವಾಹನೋತ್ಸವಗಳು ಸಹ ಚೆಲುವನಾರಾಯಣನಿಗೆ ನೆರವೇರುತ್ತದೆ ವಾಹನೋತ್ಸವಗಳು ಪ್ರತಿದಿನ ರಾತ್ರಿ ನಡೆಯಲಿದ್ದು ಮಾರ್ಚ 18ರಂದು ಹಂಸವಾಹನ 19ರಂದು ಶೇಷವಾಹನ, 20ರಂದು ಚಂದ್ರಮಂಡಲವಾಹನ, 22ರಂದು ಗರುಡವಾಹನ, 23ರಂದು ಗಜ ಮತ್ತು ಅಶ್ವವಾಹನ, 24ರಂದು ರಾತ್ರಿ ಬಂಗಾರದಪಲ್ಲಕ್ಕಿ, 25ರಂದು ಅಶ್ವವಾಹನೋತ್ಸವ, 26 ಪುಷ್ಪಮಂಟಪವಾಹನ,27 ಹಮುಮಂತವಾಹನೋತ್ಸವಗಳು ನಡೆಯಲಿದೆ.
ಇಡೀ ಮೇಲುಕೋಟೆಗೆ ಆಕರ್ಷಕ ದೀಪಾಲಂಕಾರ, ಸ್ವಾಮಿಯ ಉತ್ಸವಕ್ಕೆ ವಿಶೇಷ ತೋಮಾಲೆಗಳ ಅಲಂಕಾರ, ಮೈಸೂರು, ಬೆಂಗಳೂರು, ಮಂಡ್ಯ ಹಾಸನ ಚನ್ನರಾಯಪಟ್ಟಣ ನಾಗಮಂಗಲ ಮುಂತಾದ ಸ್ಥಳಗಳಿಂದ ವಿಶೇಷಬಸ್ ಸೌಕರ್ಯ, ಕಲ್ಪಸಲಾಗಿದೆ. ವಿವಿಧ ವೇದಿಕೆ ಸಹಯೋಗದಲ್ಲಿ “ನಾದೋಪಾಸನ ಸೇವೆ” ಮಂಗಳವಾದ್ಯ ನಿಯೋಜನೆ ಇರಲಿದೆ.