ಬಗಾರಪೇಟೆ: ಒಕ್ಕಲಿಗರ ಸಂಘ ಕಾನೂನಿನ ಪರಿಮಿತಿಯಲ್ಲಿ ಅಧೀಕೃತವಾಗಿದ್ದು, ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಮಾರ್ಗದರ್ಶನದೊಂದಿಗೆ ಕೆಂಪೇಗೌಡರ ಸಾಂಸ್ಕೃತಿಕೋತ್ಸವವನ್ನು ಸರ್ವ ಸಮುದಾಯಗಳ ಸಹಭಾಗಿತ್ವದೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಂಪೇಗೌಡರು ಒಂದು ಜಾತಿ-ಸಮುದಾಯ-ವರ್ಗಕ್ಕೆ ಸೀಮಿತವಾದವರಲ್ಲ, ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಸಹಭಾಗಿತ್ವದೊಂದಿಗೆ ಈ ಭಾರಿ ಆಗಸ್ಟ್ 9 ಭಾನುವಾರದಂದು ಕೆಂಪೇಗೌಡರ ಜಯಂತಿಯ ವಾರ್ಷಿಕೋತ್ಸವದ ಪ್ರಯುಕ್ತ ಅರ್ಥಗರ್ಭಿತವಾಗಿ ಸಾಂಸ್ಕೃತಿಕೋತ್ಸವದ ರೂಪದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದರು. ಕೆಲವು ಪಟ್ಟಭದ್ರಹಿತಾಸಕ್ತಿಗಳು ಸಮುದಾಯವನ್ನು ಹೊಡೆಯುವ ನಿಟ್ಟಿನಲ್ಲಿ ಒಕ್ಕಲಿಗರ ಸಂಘಕ್ಕೆ ಪರ್ಯಾಯವಾಗಿ ಮತ್ತೊಂದು ಸಂಘ ಸ್ಥಾಪನೆ ಮಾಡಿ ಸಮುದಾಯದ ಐಕ್ಯತೆ ಘನತೆಗೆ ಧಕ್ಕೆತರುವಂತಹ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಂಪೇಗೌಡರ ಜಯಂತೋತ್ಸವದಂದು ಪ್ರತಿ ಪಲ್ಲಕ್ಕಿಗೆ 10ಸಾವಿರ ನೀಡುವ ಭರವಸೆಯನ್ನು ನೀಡಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು. ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ರಾಜಕೀಯ ಪಕ್ಷದ ಕಪಿಮುಷ್ಠಿಯಲ್ಲಿ ಸಿಲಿಕಿ ಕೇವಲ ಒಂದು ಪಕ್ಷದ ಬೆಂಬಲಕ್ಕೆ ನಿಂತ ಕೆಲ ಮುಖಂಡರನ್ನು ಕರೆಯಿಸಿ ಪೂರ್ವಬಾವಿ ಸಭೆಯನ್ನು ಏರ್ಪಡಿಸಲಾಗಿದೆ. ಅದರಂತೆ ಕಾರ್ಯಕ್ರಮವನ್ನು ಆಚರಣೆ ಮಾಡಲು ತೀರ್ಮಾನ ಕೈಗೊಂಡಿರುವುದು ಖಂಡನೀಯ ಎಂದರು. ಕೆಲವರು ಒಕ್ಕಲಿಗರ ಸಂಘದ ಸಾಧನೆಯ ಬಗ್ಗೆ ಪದೇ ಪದೇ ಪ್ರಶ್ನೆಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ 9ರಂದು ಕೆಂಪೇಗೌಡರ ಸಾಂಸ್ಕೃತಿಕ ಉತ್ಸವದಲ್ಲಿ ಸಂಘದ ವತಿಯಿಂದ ಇದುವರೆಗೂ ಕೈಗೊಂಡಿರುವ ಸಮಗ್ರ ಮಾಹಿತಿಗಳನ್ನೊಳಗೊಂಡ ಕೈಪಿಡಿಯನ್ನು ಮುದ್ರಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುವುದು.
ಪ್ರತಿ ವರ್ಷದಂತೆ ತಾಲ್ಲೂಕು ಒಕ್ಕಲಿಗರ ಸಂಘ ಎಲ್ಲಾ ವರ್ಗ ಸಮುದಾಯಗಳ ಸಹಭಾಗಿತ್ವದಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು. ಅದರಂತೆಯೇ ಈ ಭಾರಿಯೂ ಸಹ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗೂ ಸಮುದಾಯದ ಸ್ವಾಮೀಜಿಗಳು ಮತ್ತು ಉತ್ತಮ ವಾಗ್ಮಿ ಮತ್ತು ಸಾಧಕರಿಗೆ ಆಹ್ವಾನವನ್ನು ನೀಡಲಾಗಿದೆ ಎಂದು ತಿಳಿಸಿದರು. ಕೆಲವರು ಕೆಂಪೇಗೌಡರ ಉತ್ಸವಕ್ಕೆ ಅಡ್ಡಿಪಡಿಸುವ ಎಚ್ಚರಿಕೆ ನೀಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎಂಬAತೆ ತಾಲ್ಲೂಕು ಒಕ್ಕಲಿಗರ ಸಂಘ ಕಾರ್ಯಕ್ರಮದ ಆಯೋಜನೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಗೆ ಮನವಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಮನವಿಗೆ ಪೂರಕವಾಗಿ ಭದ್ರತೆಕೊಡಿಸುವುದು ಪರಮಾದ್ಯ ಜವಾಬ್ದಾರಿಯಾಗಿದೆ, ಈ ಹಿಂದೆ ಜಯಂತಿ ಆಚರಣೆಯ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳನ್ನು ನಡೆದಿದೆ, ಅಂದಿನ ತಹಶೀಲ್ದಾರ್ ಸತ್ಯಪ್ರಕಾಶ್ ಅವರು ಕರೆದಿರುವ ಪೂರ್ವಬಾವಿ ಸಭೆಯಲ್ಲಿ ರಾಜಕೀಯ ಪ್ರೇರಿತ ವಾತಾವರಣ ನಿರ್ಮಾಣವಾಗಿ, ಪೊಲೀಸರನ್ನು ಕರೆಸಿ ನಮ್ಮನ್ನು ಹೊರಗಡೆ ಹಾಕಿ, ಅವಮಾನ ಮಾಡಲಾಯಿತು. ಇದರೊಟ್ಟಿಗೆ ಪ್ರಥಮ ಜಯಂತೋತ್ಸವ ಸಂದರ್ಭದಲ್ಲಿ ದುರುದ್ದೇಶಪೂರಕವಾಗಿ ವಕ್ಕಲಿಗ ಸಮುದಾಯದ ಕೆಲವು ಮುಖಂಡರ ಮೇಲೆ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಇಂತಹ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವಿದೆ ಎಂದರು.ಒಕ್ಕಲಿಗರ ಸಂಘಕ್ಕೆ ಪರ್ಯಾಯವಾಗಿ ಸ್ಥಾಪನೆಯಾಗಿರುವ ಎಂ.ಮುನಿರಾಜು ನೇತೃತ್ವದಲ್ಲಿ ಆಯೋಜನೆ ಮಾಡಿರುವ ಕೆಂಪೇಗೌಡ ಒಕ್ಕಲಿಗರ ಸಂಘದ ಕಾರ್ಯಕ್ರಮಕ್ಕೆ ನಮಗೆ ಯಾವುದೇ ಆಹ್ವಾನ ನೀಡಿರುವುದಿಲ್ಲ, ಯಾರು ಎಷ್ಟಾದರೂ ಹೊಸ ಸಂಘಗಳನ್ನು ಮಾಡಿಕೊಳ್ಳಲಿ, ನಮಗೆ ಅದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಂಪೇಗೌಡರು ಒಬ್ಬ ವ್ಯಕ್ತಿ ಅಥವಾ ವರ್ಗಕ್ಕೆ ಸೀಮಿತವಾದವರಲ್ಲ ಎಂದರು.ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ ಶಿವಕುಮಾರ್, ಕಾರ್ಯದರ್ಶಿ ಎಂ.ಜಿ.ಪ್ರಕಾಶ್, ಮುಖಂಡರಾದ ಹುನುಕುಂದ ವೆಂಕಟೇಶ್, ವಿ ಬಿ ಪ್ರಸಾದ್, ಎನ್ ಸತೀಶ್, ಎಸ್ ಎನ್ ಆರ್ ಶ್ರೀ ರಾಮಗೌಡ, ಹುಣಸನಹಳ್ಳಿ ಬಾಲಕೃಷ್ಣೇಗೌಡ, ದೊಡ್ರಹಳ್ಳಿ ಗೋವಿಂದ, ಭಾಸ್ಕರ್ ಗೌಡ, ತಮ್ಮೇನಹಳ್ಳಿ ಚಂದ್ರು, ಹರೀಶ್, ವೆಂಕಟಸ್ವಾಮಿಗೌಡ, ಹಿರೇಕರಪನಹಳ್ಳಿ ಚಂದ್ರು, ಪಿಳ್ಳಪ್ಪ,ರವೀಶ್ ಗೌಡ, ಮೋಹನ್ ಮತ್ತಿತರರು ಇದ್ದರು.
ಅಧಿಕೃತ ಸಂಘದಿಂದ ಕೆಂಪೇಗೌಡರ ಸಾಂಸ್ಕೃತಿಕೋತ್ಸವ: ಶಿವಕುಮಾರ್



