ಡಲ್ಲಾಸ್: ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಸಾರ್ವಕಾಲಿಕ ಮಹಾನ್ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಸೋಮವಾರ ನಡೆದ ಗ್ರೂಪ್ `ಜೆ’ ಪಂದ್ಯದಲ್ಲಿ ಆಸ್ಟಿçಯಾ ವಿರುದ್ಧ 2-0 ಅಂತರದ ಭರ್ಜರಿ ಗೆಲುವು ಸಾಧಿಸಿದ ಅರ್ಜೆಂಟೀನಾಪರ ಮೆಸ್ಸಿ ಎರಡು ಗೋಲುಗಳನ್ನು ಬಾರಿಸಿ ಈ ಮೈಲಿಗಲ್ಲು ತಲುಪಿದ್ದಾರೆ.
ಈ ಪ್ರದರ್ಶನದೊಂದಿಗೆ ಮೆಸ್ಸಿ ತಮ್ಮ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 18 ಕ್ಕೆ ಏರಿಸಿಕೊಂಡಿದ್ದಾರೆ. ಬ್ರೆಜಿಲ್ನ ಮಹಿಳಾ ಫುಟ್ಬಾಲ್ ದಂತಕಥೆ ಮಾರ್ಟಾ (17 ಗೋಲುಗಳು) ಹೆಸರಿನಲ್ಲಿದ್ದ ಜಂಟಿ (ಪುರುಷ ಮತ್ತು ಮಹಿಳಾ) ವಿಶ್ವಕಪ್ ಗೋಲುಗಳ ದಾಖಲೆಯನ್ನು ಮೆಸ್ಸಿ ಈಗ ಸಂಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಸತತ 6 ವಿಶ್ವಕಪ್(2006, 2010, 2014, 2018, 2022, 2026) ಪಂದ್ಯಗಳಲ್ಲಿ ಗೋಲು ಗಳಿಸಿದ ವಿಶಿಷ್ಟ ಸಾಧನೆಯನ್ನೂ ಅವರು ಮುಂದುವರಿಸಿ
ದ್ದಾರೆ.
ಶೀಘ್ರದಲ್ಲೇ 39ನೇ ವರ್ಷಕ್ಕೆ ಕಾಲಿಡಲಿರುವ ಮೆಸ್ಸಿಗೆ ಪಂದ್ಯದ ಆರಂಭದಲ್ಲಿ ಒಂದು ಸುವರ್ಣ ಅವಕಾಶ ಸಿಕ್ಕಿತ್ತು. ಲೌಟಾರೊ ಮಾರ್ಟಿನೆಜ್ ಅವರನ್ನು ಬಾಕ್ಸ್ ಒಳಗಡೆ ಫೌಲ್ ಮಾಡಿದಾಗ ಅರ್ಜೆಂಟೀನಾಗೆ ಪೆನಾಲ್ಟಿ ಲಭಿಸಿತ್ತು. ಆದರೆ ಮೆಸ್ಸಿ ಹೊಡೆದ ಪೆನಾಲ್ಟಿ ಕಿಕ್ ಗೋಲು ಕಂಬದ ಪಕ್ಕದಿಂದ ಹೊರಹೋಯಿತು.
ಪೆನಾಲ್ಟಿ ಮಿಸ್ ಆದರೂ ಧೃತಿಗೆಡದ ಮೆಸ್ಸಿ ಫಾಕುಂಡೊ ಮೆದಿನಾ ನೀಡಿದ ಲೋ-ಕ್ರಾಸ್ ಪಾಸ್ ಅನ್ನು ಅತ್ಯಂತ ಚಾಣಾಕ್ಷತನದಿಂದ ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ ಅರ್ಜೆಂಟೀನಾಗೆ ಮೊದಲ ಯಶಸ್ಸು ತಂದುಕೊಟ್ಟರು. ಪಂದ್ಯದ ಮುಕ್ತಾಯದ ಅವಧಿಯಲ್ಲಿ ಮತ್ತೊಂದು ಆಕರ್ಷಕ ಗೋಲು ಬಾರಿಸಿ ತಂಡದ 2-0 ಗೆಲುವನ್ನು ಖಚಿತಪಡಿಸಿದರು.
ಹಾಲಿ ಚಾಂಪಿಯನ್ ಅರ್ಜೆಂಟೀನಾ ಮೊದಲ ಪಂದ್ಯದಲ್ಲಿ ಆಲ್ಜೀರಿಯಾವನ್ನು 3-0 ಗೋಲುಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ಈಗ ಆಸ್ಟಿçಯಾವನ್ನು ಮಣಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಅಧಿಕೃತವಾಗಿ ರೌಂಡ್ 32 ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
1986ರ ವಿಶ್ವಕಪ್ನಲ್ಲಿ ಡಿಯಾಗೋ ಮರಡೋನಾ ಸೃಷ್ಟಿಸಿದ್ದ ಮ್ಯಾಜಿಕ್ ಅನ್ನು ನೆನಪಿಸುವಂತೆ, ಅರ್ಜೆಂಟೀನಾದ ಇಂದಿನ ನಂಬರ್ 10 ಜರ್ಸಿ ಆಟಗಾರ ಮೆಸ್ಸಿ ಡಲ್ಲಾಸ್ ಮೈದಾನದಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದರೆ, ಇಡೀ ಕ್ರೀಡಾಂಗಣ “ಮೆಸ್ಸಿ? ಮೆಸ್ಸಿ?” ಎಂಬ ಜಯಘೋಷದಿಂದ ಮೊಳಗುತ್ತಿತ್ತು. ಪ್ರಸ್ತುತ 2026ರ ವಿಶ್ವಕಪ್ನಲ್ಲಿ ಮೆಸ್ಸಿ ಈಗಾಗಲೇ ಒಟ್ಟು 5 ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
18 ಗೋಲಿನೊಂದಿಗೆ ಲಿಯೋನೆಲ್ ಮೆಸ್ಸಿ ಮೊದಲ ಸ್ಥಾನದಲ್ಲಿದ್ದರೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಮತ್ತು ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಎಂಬಪ್ಪೆ 16 ಗೋಲ್ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಎಂಬಪ್ಪೆ ಕೇವಲ ತಮ್ಮ 3ನೇ ವಿಶ್ವಕಪ್ ಆಡುತ್ತಿದ್ದು ಪ್ರಸ್ತುತ ಟೂರ್ನಿಯಲ್ಲಿ ಇವರೂ ಸಕ್ರಿಯರಾಗಿದ್ದು, ಮೆಸ್ಸಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. 15 ಗೋಲ್ ಸಿಡಿಸಿದ ಬ್ರೆಜಿಲಿನ ರೊನಾಲ್ಡೋ ಮೂರನೇ ಸ್ಥಾನದಲ್ಲಿದ್ದಾರೆ.
2 ಗೋಲ್ ಹೊಡೆದು ವಿಶ್ವದಾಖಲೆ ಬರೆದ ಮೆಸ್ಸಿ



