ಮುಂಬೈ: 2 ವರ್ಷದ ಪ್ರೀತಿಯ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಜು.5ರಂದು ಗೌರಿ ಜೊತೆ ಮದುವೆಯಾಗುತ್ತಿರುವುದು ನಿಜ ಎಂದು ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ.
(ಜೂ.3) ಆಮೀರ್ ಖಾನ್ ಪ್ರೇಯಸಿ ಗೌರಿ ಜೊತೆ ಮದುವೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಆಮೀರ್ ಖಾನ್, ಹೌದು, 2 ವರ್ಷಗಳ ಪ್ರೀತಿಯ ಬಳಿಕ ಜು.5ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಗೌರಿ ಜೊತೆ ಮದುವೆಯಾಗುತ್ತಿರುವ ಸುದ್ದಿ ನಿಜ ಎಂದು ತಿಳಿಸಿದ್ದಾರೆ.ಆಮೀರ್ ಮತ್ತು ಗೌರಿ ಯಾವುದೇ ರೀತಿಯ ತೋರ್ಪಡಿಕೆಯಿಲ್ಲದಂತೆ ಅತ್ಯಂತ ಖಾಸಗಿಯಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಇಬ್ಬರು ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಜೀವನವನ್ನು ಅನಗತ್ಯ ಪ್ರಚಾರದಿಂದ ದೂರವಿಡಲು ನಿರ್ಧರಿಸಿದ್ದಾರೆ. ಯಾವುದೇ ಅದ್ದೂರಿ ರಿಸೆಪ್ಷನ್ ಅಥವಾ ಇನ್ನಿತರ ಪಾರ್ಟಿಗಳ ಬದಲಾಗಿ, ಕೇವಲ ತಮ್ಮ ಆಪ್ತರೊಂದಿಗೆ ವಿಶೇಷ ದಿನವನ್ನು ಕಳೆಯಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಪ್ರೇಯಸಿ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಸದ್ಯ ಗೌರಿ ಅವರ ಜೊತೆ ಮೂರನೇ ಮದುವೆ ಆಗುತ್ತಿದ್ದಾರೆ. ಇದಕ್ಕೂ ಮುನ್ನ ಆಮೀರ್ ಖಾನ್ 1986ರಲ್ಲಿ ತಮ್ಮ ಬಾಲ್ಯದ ಗೆಳತಿ ರೀನಾ ದತ್ತಾ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು. ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನದ ಬಳಿಕ 2002ರಲ್ಲಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಲಗಾನ್ ಚಿತ್ರದ ಸಹ-ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಬಳಿಕ ಇವರಿಬ್ಬರು 2021ರಲ್ಲಿ ಬೇರ್ಪಟ್ಟರು. ದಂಪತಿಗೆ ಸರೋಗೆಸಿ ಮೂಲಕ ಜನಿಸಿದ ಆಜಾದ್ ಎಂಬ ಮಗನಿದ್ದಾನೆ



