ಬೆಂಗಳೂರು: ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ (47) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ದಿಲೀಪ್ ರಾಜ್ ನಿಧನರಾಗಿದ್ದಾರೆ.ಇಂದು ಬೆಳಗಿನ ಜಾವ ಮನೆಯಲ್ಲಿ ಕುಸಿದುಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ಕಂಠದಾನ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. 2007ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ `ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ನಂತರ `ಯು ಟರ್ನ್’, `ಲವ್ ಗುರು’, `ಗಾನಾ ಬಜಾನಾ’, ಮತ್ತು `ಆರ್ಕೆಸ್ಟ್ರಾ ಮೈಸೂರು’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದರು.ಕಿರುತೆರೆ ಪಯಣ: `ಜನನಿ’, `ರಂಗೋಲಿ’, `ರಥಸಪ್ತಮಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಇತ್ತೀಚೆಗೆ ಜೀ ಕನ್ನಡದ `ಹಿಟ್ಲರ್ ಕಲ್ಯಾಣ’ ಧಾರಾವಾಹಿಯ `ಎ.ಜೆ’ (ಅಭಿರಾಮ್ ಜಯಶಂಕರ್) ಪಾತ್ರದ ಮೂಲಕ ಮನೆಮಾತಾಗಿದ್ದರು.ನಿರ್ಮಾಣ ಮತ್ತು ಡಬ್ಬಿಂಗ್: ಅವರು `ಪಾರು’ ಮತ್ತು `ವಿದ್ಯಾ ವಿನಾಯಕ’ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅಲ್ಲದೆ, `ಆ ದಿನಗಳು’ ಚಿತ್ರದ ನಾಯಕ ಚೇತನ್ ಅವರಿಗೆ ಧ್ವನಿ ನೀಡುವ ಮೂಲಕ ಡಬ್ಬಿಂಗ್ ಕಲಾವಿದರಾಗಿಯೂ ಯಶಸ್ವಿಯಾಗಿದ್ದರು.ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಪತ್ನಿ ಶ್ರೀವಿದ್ಯಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಇವರು `ಟ್ರೆಡ್ಮಿಲ್’ ನಂತಹ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.ಸಂತಾಪ: ದಿಲೀಪ್ ರಾಜ್ ಅವರ ನಿಧನಕ್ಕೆ ಸ್ಯಾಂಡಲ್ವುಡ್ ಗಣ್ಯರು ಮತ್ತು ಕಿರುತೆರೆಯ ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ `ಎಜೆ’ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.



