ಬೆಂಗಳೂರು: ಇನ್ನು ಹೆಬ್ಬಾಳದ ಉದ್ಯಾನಗಳು ಮತ್ತಷ್ಟು ಹಸಿರಿನಿಂದ ಕಂಗೊಳಿಸಲಿವೆ. ಕ್ಷೇತ್ರದ 50 ಕ್ಕೂ ಹೆಚ್ಚು ಉದ್ಯಾನಗಳನ್ನು ಅಭಿವೃದ್ಧಿ ಮತ್ತು ನವೀಕರಣ ಮಾಡಲಾಗುತ್ತಿದೆ.
ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು, ನವೀಕರಣಗೊಳಿಸಲಾಗಿರುವ ಭೂಪಸಂದ್ರದ ಗೆದ್ದಲಹಳ್ಳಿ ಪಾರ್ಕ್, ಕೆಇಬಿ ಪಾರ್ಕ್, ಎಸಿಎಸ್ ಬಡಾವಣೆ ಪಾರ್ಕ್, ಪೋಸ್ಟಲ್ ಕಾಲೋನಿ ಪಾರ್ಕ್ ಮತ್ತು ನಾಗಶೆಟ್ಟಿಹಳ್ಳಿಯ ಎನ್ ಜಿಇಎಫ್ ಬಡಾವಣೆ ಪಾರ್ಕುಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೈರತಿ ಸುರೇಶ್ ಅವರು, ರಾಜ್ಯ ಸರ್ಕಾರದ 30 ಕೋಟಿ ರೂಪಾಯಿ ವಿಶೇಷ ಅನುದಾನದಡಿ ಈ ಉದ್ಯಾನಗಳನ್ನು ನವೀಕರಣ ಮಾಡಲಾಗುತ್ತಿದೆ. ಇದೀಗ ಐದು ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಉದ್ಘಾಟಿಸಲಾಗಿದೆ. ಇನ್ನುಳಿದ ಪಾರ್ಕುಗಳ ನವೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಂತಹAತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ ಎಂದರು.
ಉದ್ಯಾನಗಳಲ್ಲಿ ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ವಾಕಿಂಗ್ ಪಾತ್, ವಿದ್ಯುದ್ದೀಪಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಯೋಗಾಭ್ಯಾಸಕ್ಕೆ ಸೌಲಭ್ಯ, ಓಪನ್ ಜಿಮ್ ಗಳಲ್ಲಿ ವ್ಯಾಯಾಮ ಕಸರತ್ತುಗಳ ಸಲಕರಣೆಗಳ ಅಳವಡಿಕೆ:- ಹೀಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದಲ್ಲದೇ, ಸದಾ ಹಸಿರಿನಿಂದ ಕಂಗೊಳಿಸುವAತೆ ಮಾಡಲು ನಿರಂತರವಾಗಿ ಗಿಡ-ಮರಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಕೊರತೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 50 ಉದ್ಯಾನಗಳನ್ನು ನವೀಕರಣ ಮಾಡಲಾಗುತ್ತಿದ್ದು, ಇವುಗಳ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದಲ್ಲಿ ಉಳಿದ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೈರತಿ ಸುರೇಶ್ ತಿಳಿಸಿದರು.
60 ಹೊಸ ಬೋರ್ ವೆಲ್: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಕೊರತೆ ಅಷ್ಟಾಗಿ ಕಾಡುತ್ತಿಲ್ಲ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಅನಿಯಮಿತವಾಗಿ ನೀರು ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ಇದುವರೆಗೆ 60 ಕ್ಕೂ ಹೆಚ್ಚು ಹೊಸ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಹೊಸ ಬೋರ್ ವೆಲ್ ಗಳನ್ನು ಕೊರೆಯಲಾಗುವುದು ಎಂದರು.
ಬೆಂಗಳೂರು ಮಹಾನಗರದ ಹೆಬ್ಬಾಳದ 50ಕ್ಕೂ ಹೆಚ್ಚು ಪಾರ್ಕುಗಳಿಗೆ ಹೊಸ ಕಳೆ ಕ್ಷೇತ್ರದ ಸೌಂದರ್ಯ ಹೆಚ್ಚಳಕ್ಕೆ ಪೂರಕ: ಬೈರತಿ ಸುರೇಶ್



