ಇಸ್ಲಾಮಾಬಾದ್/ಟೆಹ್ರಾನ್/ವಾಷಿಂಗ್ಟನ್: ಇರಾನ್-ಅಮೆರಿಕ ನಡುವೆ ಏರ್ಪಟ್ಟಿರುವ 15 ದಿನಗಳ ಕದನವಿರಾಮ ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 5.30ಕ್ಕೆ ಅಂತ್ಯಗೊಳ್ಳಲಿದೆ. ಅದಕ್ಕಿಂತ ಮೊದಲು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ 2ನೇ ಸುತ್ತಿನ ಸಂಧಾನ ಸಭೆ ಆಯೋಜನೆ ಆಗಿದೆ.ಈ ಸಭೆಗೆ ಅಮೆರಿಕ ನಿಯೋಗ ಆಗಮಿಸುತ್ತಿದ್ದು, ಈ ಹಿಂದಿನಂತೆ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಸಮಿತಿಯನ್ನು ಪಾಕ್ಗೆ ರವಾನಿಸುವುದಾಗಿ ಹೇಳಿದೆ. ಆದರೆ ಇರಾನ್ ಸರ್ಕಾರವು ತನ್ನ ಭಾಗವಹಿಸುವಿಕೆಯ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಈ ಅನಿಶ್ಚಿತತೆಯ ಕಾರಣ ಮುಂದೆ ಶಾಂತಿ ನೆಲೆಸಲಿದೆಯೋ ಅಥವಾ ಮತ್ತೆ ಕದನ ಆರಣಭವಾಗುತ್ತದೆಯೋ ಎಂಬ ಪ್ರಶ್ನೆ ಮೂಡಿದೆ.ಏ.11ಕ್ಕೆ ಪಾಕ್ ಮಧ್ಯಸ್ಥಿಕೆಯಲ್ಲಿ ನಡೆದ ಮೊದಲ ಸುತ್ತಿನ ಸಂಧಾನ ಸಭೆ ವಿಫಲವಾಗಿತ್ತು. ಇದಾದ ನಂತರ ವಿಶ್ವದ ಶೇ.20ರಷ್ಟು ತೈಲ ಸಾಗಣೆ ಆಗುವ ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್ಬಂಧ ಮುಂದುವರಿಸಿದರೆ, ಅದರ ಮೇಲೆ ಹಕ್ಕು ಸಾಧಿಸಲು ಅಮೆರಿಕ ದಿಗ್ಬಂಧನ ಹೇರಿತ್ತು. ಹೀಗಾಗಿ ಈ ಜಟಾಪಟಿಗೆ ಶಾಶ್ವತ ಅಂತ್ಯ ಹಾಡಲು ಇನ್ನೊಂದು ಸುತ್ತಿನ ಸಭೆ ಅನಿವಾರ್ಯವಾಗಿತ್ತು. ಅದಕ್ಕೆಂದೇ ಪಾಕಿಸ್ತಾನವು ತೆರೆಮರೆಯ ಯತ್ನ ನಡೆಸಿ 2ನೇ ಸಂಧಾನ ಸಭೆಗೆ ಏರ್ಪಡಿಸಿದೆ.ಇರಾನ್ನಿಂದ ಅನಿಶ್ಚಿತತೆ: ಸಂಧಾನ ಸಭೆ ಮಂಗಳವಾರ ನಿಗದಿಯಾಗಿದ್ದರೂ, ಇರಾನ್ ಈ ಸಭೆಗೆ ಹೋಗಲು ಹಿಂದೇಟು ಹಾಕುತ್ತಿದೆ. `ಅಮೆರಿಕ ಪದೇ ಪದೇ ನಿಲುವು ಬದಲಿಸುತ್ತಿದೆ. ಕದನವಿರಾಮ ಉಲ್ಲಂಘಿಸಿ ಹೋರ್ಮುಜ್ ಮೇಲೆ ದಿಗ್ಬಂಧನ ಹೇರಿದೆ’ ಎಂದು ಕಿಡಿಕಾರಿದೆ. ಇರಾನ್ ವಿದೇಶಾಂಗ ವಕ್ತಾರ ಇಸ್ಮಾಯಿಲ್ ಬಖೈ ಸೋಮವಾರ ಮಾತನಾಡಿ, `ಸಂಧಾನಸಭೆಗೆ ಹೋಗುವ ಯಾವುದೇ ಪ್ಲಾನ್ ಸದ್ಯಕ್ಕಿಲ್ಲ. ಆದರೆ ಯಾವುದೂ ನಿರ್ಧಾರ ಆಗಿಲ್ಲ’ ಎಂದಿದ್ದಾರೆ.ಇಂದೇ ಶಾಂತಿ ಡೀಲ್- ಟ್ರಂಪ್: ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ. `ಇರಾನ್ ಜತೆಗಿನ 2ನೇ ಸುತ್ತಿನ ಮಾತುಕತೆಗಾಗಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ತೆರಳಿದ್ದಾರೆ. ಇಂದೇ (ಭಾರತೀಯ ಕಾಲಮಾನ ಮಂಗಳವಾರ) ಡೀಲ್ ಆಗಲಿದೆ’ ಎಂದು ಘೋಷಿಸಿದ್ದಾರೆ.ವ್ಯಾನ್ಸ್ ಜತೆ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷರ ಸಲಹೆಗಾರ ಜೇರ್ಡ್ ಕುಶ್ನರ್ ಕೂಡ ಹೋಗಿದ್ದಾರೆ. ಮೊದಲ ಬಾರಿ ಇಲ್ಲೇ ನಡೆದ ಮಾತುಕತೆಗೂ ಇದೇ ತಂಡ ಹೋಗಿತ್ತು. ಕನದವಿರಾಮ ಅಂತ್ಯವಾಗುವ ದಿನ (ಬುಧವಾರ) ಸಮೀಪಿಸುತ್ತಿರುವ ಹೊತ್ತಿನಲ್ಲಿ ನಡೆಯುತ್ತಿರುವ ಈ ಸಭೆಯು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಲಿರುವುದರಿಂದ ಇದರ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.ಕಮಾಂಡೋಗಳ ಕಳಿಸಿ ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕವಾಷಿಂಗ್ಟನ್: ಹೋರ್ಮುಜ್ ಜಲಸಂಧಿ ಮೂಲಕ ಸಾಗಲೆತ್ನಿಸಿದ ಇರಾನ್ ಹಡಗನ್ನು ಅಮೆರಿಕ ನೌಕಾಸೇನೆ ಸೋಮವಾರ ವಶಕ್ಕೆ ಪಡೆದಿದೆ. ಅಮೆರಿಕವು ಹೋರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಇರಾನ್ ಹಡಗೊಂದನ್ನು ವಶಕ್ಕೆ ಪಡೆಯುತ್ತಿರುವುದು ಇದೇ ಮೊದಲು. ಇರಾನ್ ಬಂದರಿಗೆ ತೆರಳುತ್ತಿದ್ದ ಟೌಸ್ಕಾ ಎಂಬ ಹಡಗಿಗೆ ವಾಪಸ್ ತೆರಳಲು ಅಮೆರಿಕ ನೌಕಾಪಡೆ ಸೂಚಿಸಿತು. ಅದು ವಾಪಸ್ ಹೋಗದೇ ಇದ್ದಾಗ ಹೆಲಿಕಾಪ್ಟರ್ ಮೂಲಕ ಕಮಾಂಡೋಗಳನ್ನು ಕಳುಹಿಸಿ ಹಡಗಿನ ಎಂಜಿನ್ ರೂಂ ಅನ್ನು ಖಾಲಿ ಮಾಡಿಸಿ ಹಡಗನ್ನು ವಶಕ್ಕೆ ಪಡೆಯಲಾಗಿದೆ.



