ಬೆಂಗಳೂರು: ಮೇಲ್ಮನೆ ಚುನಾವಣೆಗೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮತ ಬೇಟೆಗಾಗಿ ಜೆಡಿಎಸ್ ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಿದೆ. ಏಳು ಸ್ಥಾನಗಳಿಗೆ ಸಂಬAಧಪಟ್ಟAತೆ ನಾಳೆ ಬೆಳಿಗ್ಗೆಯಿಂದ ಮತದಾನ ಆರಂಭವಾಗಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಮರ್ನಾಲ್ಕು ಮತಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಎರಡು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತೀವ್ರವಾಗಿ ರಣತಂತ್ರ ನಡೆಸುತ್ತಿವೆ. ಈಗಾಗಲೇ ಐದು ಸ್ಥಾನಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಣಕ್ಕಿಳಿಸಿರುವ ಕಾಂಗ್ರೆಸ್ ನಿನ್ನೆಯಿಂದಲೇ ತನ್ನ ಪಕ್ಷದ ಶಾಸಕರನ್ನು ಒಂದೆಡೆ ಸೇರಿಸಿ ಅಡ್ಡ ಮತದಾನವಾಗದಂತೆ ಎಚ್ಚರಿಕೆ ನಡೆ ಆರಂಭಿಸಿದೆ. ನಿನ್ನೆ ರಾತ್ರಿ ಬಿಡದಿ ಹೊರವಲಯದ ರೆಸಾರ್ಟ್ನಲ್ಲಿ ತನ್ನ ಶಾಸಕರ ಸಭೆಯನ್ನು ನಡೆಸಿ ಯಾರೂ ಕೂಡ ತಮ್ಮ ಮತವನ್ನು ಪೋಲಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ಮತದಾನದ ಸಂಬಂಧ ಮಾಹಿತಿ ಹಾಗೂ ತರಬೇತಿಯನ್ನು ನೀಡಿದೆ. ಜೆಡಿಎಸ್ನವರು ತನ್ನ ಶಾಸಕರನ್ನು ಭೇಟಿ ಮಾಡಿ ತನ್ನತ್ತ ಸೆಳೆಯಲು ಮಾಡಿರುವ ಕಾರ್ಯತಂತ್ರದ ಬಗ್ಗೆಯೂ ತನಗೆಲ್ಲಾ ಮಾಹಿತಿ ಬಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಂದು ಸಹ ಬೆಳಿಗ್ಗೆಯಿಂದ ರೆಸಾರ್ಟ್ನಲ್ಲೇ ಹಾಜರಿರಲು ಶಾಸಕರಿಗೆ ಕರೆ ನೀಡಲಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಮತ ಚಲಾಯಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾಕಷ್ಟು ಮಂದಿ ಕಾಂಗ್ರೆಸ್ ಶಾಸಕರು ಹೊಸದಾಗಿ ಆಯ್ಕೆಯಾಗಿ ಬಂದಿರುವುದರಿಂದ ಅವರಿಗೆ ಆದ್ಯತೆ ಮೇರೆಗೆ ಪ್ರಾಶಸ್ತ್ಯ ಮತಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇತ್ತ ಜೆಡಿಎಸ್ನವರು ಸಹ ಇಂದುಸAಜೆ 6 ಗಂಟೆಗೆ ಬೆಂಗಳೂರು ಹೊರ ವಲಯದ ಗಾಲ್ಫ್ಶೈರ್ ರೆಸಾರ್ಟ್ನಲ್ಲಿ ತನ್ನ ಶಾಸಕರ ಸಭೆ ನಡೆಸಲಿದ್ದಾರೆ. ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ ಎಂದು ಹೇಳಲಾಗಿದೆ. ಹಾಲಿ ತನ್ನ ಪಕ್ಷದ 18 ಶಾಸಕರ ಜತೆಗೆ ಜೆಡಿಎಸ್ಗೆ ತನ್ನ ಮಿತ್ರಪಕ್ಷವಾದ ಬಿಜೆಪಿಯ 6 ಹೆಚ್ಚುವರಿ ಮತಗಳ ಬೆಂಬಲ ದೊರೆಯಲಿದ್ದು, ಉಳಿದಂತೆ ನಾಲ್ಕು ಮತಗಳಿಗಾಗಿ ಯಾವ ರೀತಿಯ ಕಾರ್ಯತಂತ್ರ ನಡೆಸುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. 224 ಸದಸ್ಯರ ವಿಧಾನಸಭೆಯಲ್ಲಿ 222 ಶಾಸಕ ಹಾಲಿಯಿದ್ದಾರೆ. ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ಗೌಡ ಕೊಲೆ ಪ್ರಕರಣ ಜೈಲು ಸೇರಿರುವ ಶಾಸಕ ವಿನಯ್ಕುಲಕರ್ಣಿ ಅವರ ಮತ ಅನರ್ಹವಾಗಿದೆ. ಹಿರಿಯೂರು ಕ್ಷೇತ್ರದ ಡಿ.ಸುಧಾಕರ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿದೆ. 222 ಸದಸ್ಯರ ಪೈಕಿ ಕಾಂಗ್ರೆಸ್ 135, ಸರ್ವೋದಯ ಪಕ್ಷ ಹಾಗೂ ಪಕ್ಷೇತರರು ಸೇರಿ 138 ಹಾಗೂ ಪಕ್ಷೇತರರು ಸೇರಿ ಒಟ್ಟು 132 ಕಾಂಗ್ರೆಸ್ನದ್ದಾಗಿದೆ. ಉಚ್ಛಾಟಿತ ಬಿಜೆಪಿ ಶಾಸಕರಾದ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ಗೆ ಮತ ನೀಡುತ್ತಾರೆ ಎಂದು ವ್ಯಾಪಕವಾಗಿ ಕೇಳಿ ಬರುತ್ತಿದೆ. 140 ಮತಗಳು ಕಾಂಗ್ರೆಸ್ನದ್ದಾದರೆ ಬಿಜೆಪಿ 62 ಶಾಸಕರ ಪೈಕಿ ತಮಗೆ ಬೇಕಾದ 56 ಶಾಸಕರನ್ನು ತನ್ನ ಅಭ್ಯರ್ಥಿಗಳಿಗೆ ಪಡೆದು ಹೆಚ್ಚುವರಿ 6 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸಲಿದೆ. ಮತ್ತೋರ್ವ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಅವರ ಮತದಾನ ಪಡೆಯಲು ಜೆಡಿಎಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಚುನಾವಣೆಯಲ್ಲಿ ಯಾರ ಮತಗಳನ್ನು ಯಾರು ಪಡೆಯುತ್ತಾರೆ ಎಂಬುದು ಇದೀಗ ಜೋರಾಗಿ ಚರ್ಚೆ ನಡೆದಿದೆ.



