ಬೆಂಗಳೂರು: ಬಿಡದಿ ಟೌನ್ಶಿಪ್ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ಇದೀಗ ಕಾಂಗ್ರೆಸ್ ಜೆಡಿಎಸ್ ನಡುವೆ ಪರಸ್ಪರ ಕೆಸರೆರೆಚಾಟ ಎಡೆಮಾಡಿಕೊಟ್ಟಿದೆ. ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಹೋರಾಟ ನಡೆಸುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಬಗ್ಗೆ ಪೋಸ್ಟರ್ ಸಮರ ನಡೆದಿದೆ. ಇದನ್ನು ವಿರೋಧಿಸಿ ಕುಮಾರಸ್ವಾಮಿ ಅವರು ಸಹ ತಮ್ಮ ಹೋರಾಟವನ್ನು ಹೆಚ್ಚಿಸುತ್ತಾ ಹೋಗಿ ಮುಖ್ಯಮಂತ್ರಿಯವರ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ ತಮ್ಮ ಕುಟುಂಬದವರ ವಿರುದ್ಧ ಪೋಸ್ಟರ್ ಅಂಟಿಸುವ ಕೆಲಸವನ್ನು ಮಾಡಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಅವರಿಗೆ ಮೊದಲಿನಿಂದಲೂ ಈ ವಿಕೃತ ಮನಸ್ಥಿತಿ ಬಂದಿದೆ. ಮುಖ್ಯಮಂತ್ರಿಯಾದ ನಂತರ ಇಂತಹ ಕೃತ್ಯಗಳನ್ನು ಬಿಡಬಹುದುಎಂದು ಭಾವಿಸಿದ್ದೆ. ಆದರೂ ಸಹ ಅವರು ಈ ಕೆಲಸವನ್ನು ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ. ಈ ಎಲ್ಲದರ ನಡುವೆ ಇಂದು ಬಿಜೆಪಿ ಭೂಸ್ವಾಧೀನದ ವಿರುದ್ಧ ತನ್ನ ಹೋರಾಟ ಆರಂಭಿಸಿದೆ.
ಬಿಜೆಪಿಯ ನಾಯಕರಾದ ಆರ್. ಅಶೋಕ್ ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ನಾರಾಯಣ, ಸುರೇಶ್ಕುಮಾರ್ ಮತ್ತಿತರರು ಇಂದು ಬಿಡದಿ ಟೌನ್ಶಿಪ್ ವಿರುದ್ಧ ನಡೆಯುತ್ತಿರುವ ಹೋರಾಟದ ಗ್ರಾಮಗಳಾದ ಅರಳಾರುಸಂದ್ರ, ಕೆಂಪಯ್ಯನಪಾಳ್ಯ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ರೈತರೊಂದಿಗೆ ಸಂವಾದ ನಡೆಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.



