ಬೆಂಗಳೂರು; ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕನಕಪುರ ಪ್ರವಾಸಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿಯವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಇಂದಿಗೆ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅವರು ಒಂದು ತಿಂಗಳಲ್ಲಿ ತಾವು ಸಾಧಿಸಿರುವ ಕಾರ್ಯಗಳ ಬಗ್ಗೆ ಮಾಹಿತಿ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಮಾಜಿ ಮುಖ್ಯಮಂತ್ರಿಯವರಿಗೂ ತಿಳಿಸಿರುವ ಶಿವಕುಮಾರ್, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮೊಂದಿಗೆ 13 ಜನರನ್ನು ಮಂತ್ರಿಗಳಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಇದೀಗ ಉಳಿದ 20ಮಂದಿಯನ್ನು ಸಂಪುಟಕ್ಕೆ ಸೇರಿಸಲು ಮುಖ್ಯಮಂತ್ರಿಯವರು ತಯಾರಾಗಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು 7ರಂದು ಭಾರತಕ್ಕೆ ಹಿಂದಿರುಗಲಿದ್ದಾರೆ. ಅಷ್ಟರೊಳಗಾಗಿ ಸಂಭವನೀಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದು, ರಾಹುಲ್ ಅವರ ಅನುಮೋದನೆಗೆ ದೆಹಲಿಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ 20 ಮಂದಿ ಸಚಿವ ಸ್ಥಾನಕ್ಕೆ ಸುಮಾರು 50ರಿಂದ 60 ಮಂದಿ ಶಾಸಕರು ಪಕ್ಷದ ಹೈಕಮಾಂಡ್ ಪ್ರಮುಖರನ್ನು ಹಾಗೂ ರಾಜ್ಯದ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯವರನ್ನು ಎಡತಾಕುತ್ತಿದ್ದಾರೆ. ಮೊದಲ ಬಾರಿಗೆ ಎರಡನೇ ಬಾರಿಗೆ ಹಾಗೂ ಹಲವು ಬಾರಿ ಸಚಿವರಾಗದೆ ಇರುವವರು ಮಂತ್ರಿಗಳಾಗಲು ಸತತ ಪ್ರಯತ್ನ ನಡೆಸಿದ್ದಾರೆ. ಕಿರಿಯರೊಂದಿಗೆ ಸಂಪುಟ ಸೇರಲು ಈಗಾಗಲೇ ನಾಲ್ಕೈದು ಬಾರಿ ಸಚಿವರಾಗಿದ್ದವರು ಸಹ ಪೈಪೋಟಿ ನಡೆಸುತ್ತಿದ್ದಾರೆ.
ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಬಿ.ಜಯಚಂದ್ರ, ಬಸವರಾಜರಾಯರೆಡ್ಡಿ ಸೇರಿದಂತೆ ಹಲವು ಮಂದಿ ಹಿರಿಯರು ಸಚಿವರಾಗಲು ಹವಣಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯರವರನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಪತ್ನಿ ಉಷಾ, ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಮೂವರೊಂದಿಗೆ ಒಟ್ಟಿಗೆ ಉಪಹಾರ ಸೇವಿಸಿದರು. ಡಿ.ಕೆ.ಸುರೇಶ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು.
ಸಂಪುಟ ವಿಸ್ತರಣೆಗೆ ಸಿದ್ಧತೆ? ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ



