ಬೆಂಗಳೂರು: ಪಕ್ಷದಲ್ಲಿರುವ ಗೊಂದಲಗಳು ಆದಷ್ಟೂ ಶೀಘ್ರ ಬಗೆಹರಿಯಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ನ ಹಿರಿಯ ಶಾಸಕರು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಮತ್ತೆ ದೆಹಲಿಗೆ ಹೋಗುತ್ತಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಅವರು, ಪಕ್ಷದಲ್ಲಿನ ಗೊಂದಲ ಶೀಘ್ರ ಬಗೆಹರಿಯಬೇಕು. ಆಡಳಿತ ಸುಸೂತ್ರವಾಗಿ ನಡೆಯಬೇಕೆಂದರೆ ಗೊಂದಲ ಕೊನೆಗಾಣಬೇಕು ಎಂದು ಹೇಳಿದ್ದಾರೆ. ಹೈಕಮಾಂಡ್ ವರಿಷ್ಠರು ಆದಷ್ಟೂ ಶೀಘ್ರ ಈ ವಿಷಯವನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಸಂಪುಟ ಪುನರ್ ರಚನೆ ಸಂಬಂದಪಟ್ಟಂತೆ ಈ ಬಗ್ಗೆ ಮುಖ್ಯಮಂತ್ರಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸೋನಿಯಾಗಾಂಧಿ ಅವರು ನಿರ್ಧರಿಸುತ್ತಾರೆ. ಈ ಬಗ್ಗೆ ನಾವೇನು ಮಾತನಾಡುವುದಿಲ್ಲ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬAಧಪಟ್ಟAತೆ ಮಾತನಾಡಿ, ಇತರ ಫಲಿತಾಂಶ ಬರುತ್ತದೆ ಎಂದು ಯಾರೂ ನಿರೀಕ್ಷಿಸಲಿರಲಿಲ್ಲ. ಆಶ್ಚರ್ಯಕರ ಫಲಿತಾಂಶ ಬಂದಿದೆ. ಯುವಜನತೆ ಬದಲಾವಣೆ ಬಯಿಸಿದ್ದಾರೆ ಎಂದು ಹೇಳಿದ ಅವರು ಟಿವಿಕೆ ಪಕ್ಷದ ಸಾಧನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಸಂಬಂಧ ಮಾತನಾಡಿ, ಮುಖ್ಯಮಂತ್ರಿಗಾದಿಗಾಗಿ ಇಬ್ಬರು ಮೂವರು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾಗ ಸ್ವಲ್ಪ ತಡವಾಗುವುದು ಸಹಜ. ಆದಷ್ಟೂ ಬೇಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಗೊಂದಲ ಬಗೆಹರಿಯಬೇಕು ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಬಗ್ಗೆ ಸಚಿವ ಪರಮೇಶ್ವರ್ ಪ್ರತಿಕ್ರಿಯೆ



