ಹೈದರಾಬಾದ್: ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯಗಳಿಂದ ಆತ್ಮವಿಶ್ವಾಸದಲ್ಲಿರುವಮ ಸನ್ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 21ರ ಮಂಗಳವಾರದಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಆಡಿದ ಆರು ಪಂದ್ಯಗಳಲ್ಲಿ ತಲಾ ಮೂರು ಜಯ ಹಾಗೂ ಸೋಲು ಕಂಡು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ‘ಆರೆಂಜ್ ಆರ್ಮಿ’, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತೋರಿದ್ದ ಅದೇ ಆಕ್ರಮಣಕಾರಿ ಆಟವನ್ನು ಡೆಲ್ಲಿ ವಿರುದ್ಧವೂ ಮುಂದುವರಿಸುವ ತವಕದಲ್ಲಿದೆ.ಹೈದರಾಬಾದ್ ತಂಡಕ್ಕೆ ಪ್ರಮುಖ ಬಲವಾಗಿರುವುದು ಬ್ಯಾಟರ್ಗಳ ಭರ್ಜರಿ ಫಾರ್ಮ್. ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್ ಮತ್ತು ಇಶಾನ್ ಕಿಶನ್ ರನ್ ಹೊಳೆ ಹರಿಸುತ್ತಿರುವುದು ತಂಡದ ಧೈರ್ಯ ಹೆಚ್ಚಿಸಿದೆ. ಆದರೆ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಇನ್ನೂ ನೈಜ ಲಯಕ್ಕೆ ಮರಳದಿರುವುದು ತಂಡಕ್ಕೆ ಸಣ್ಣ ಮಟ್ಟದ ಆತಂಕ ಮೂಡಿಸಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಯುವಕರಾದ ಪ್ರಫುಲ್ ಹಿಂಗೆ ಮತ್ತು ಸಕಿಬ್ ಹುಸೇನ್ ಕಳೆದ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ತಂಡದ ಹೊಸ ಶಕ್ತಿಯಾಗಿ ಉದಯಿಸಿದ್ದಾರೆ.ಅತ್ತ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸರಿಸಮಾನವಾದ ಪೈಪೋಟಿ ನೀಡಲು ಸಜ್ಜಾಗಿದೆ. ಆಡಿದ ಐದು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿರುವ ಡೆಲ್ಲಿ, ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಜಯ ದಾಖಲಿಸಿ ಜಯದ ಹಾದಿಗೆ ಮರಳಿದೆ. ಕೆ.ಎಲ್. ರಾಹುಲ್, ಪಾಥುಮ್ ನಿಸ್ಸಾಂಕ ಮತ್ತು ಸಮೀರ್ ರಿಜ್ವಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಸ್ಫೋಟಕ ಆಟಗಾರರು ಎಂಥದ್ದೇ ಗುರಿಯನ್ನು ಬೆನ್ನಟ್ಟುವ ಸಾಮರ್ಥ್ಯ ಹೊಂದಿದ್ದಾರೆ.ಅಂಕಿಅಂಶಗಳ ಪ್ರಕಾರ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿತವಾಗಿದೆ. ಇದುವರೆಗೆ ನಡೆದಿರುವ 26 ಮುಖಾಮುಖಿ ಪಂದ್ಯಗಳಲ್ಲಿ ಹೈದರಾಬಾದ್ 13 ರಲ್ಲಿ ಗೆದ್ದಿದ್ದರೆ, ಡೆಲ್ಲಿ 12 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಕೇವಲ ಒಂದು ಪಂದ್ಯದ ಅಂತರವಿರುವ ಈ ಅಂಕಿಅಂಶಗಳು ಮಂಗಳವಾರದ ಪಂದ್ಯದಲ್ಲಿ ಹೈದರಾಬಾದ್ನ ಮೈದಾನದಲ್ಲಿ ಹೈ-ವೋಲ್ಟೇಜ್ ಪಂದ್ಯ ನಡೆಯುವುದಕ್ಕೆ ಸಾಕ್ಷಿಯಾಗಲಿವೆ.ಬ್ಯಾಟಿಂಗ್ ಸ್ನೇಹಿ ಪಿಚ್ಹೈ ದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇನ್ನು ತ್ವರಿತ ಹೊರಾಂಗಣ ಇರುವುದರಿಂದ ಚೆಂಡು ವೇಗವಾಗಿ ಬೌಂಡರಿಯತ್ತ ಚಲಿಸುತ್ತವೆ. ಹೀಗಾಗಿ ಬ್ಯಾಟರ್ ಗಳಿಗೆ ರನ್ ಕದಿಯುವುದು ಸುಲಭ.



