ಕೆಜಿಎಫ್: ಭಾರತ ಚುನಾವಣಾ ಆಯೋಗದ ಆದೇಶದಂತೆ ಹಾಗೂ ಕೋಲಾರ ಜಿಲ್ಲಾ ಆಡಳಿತ, ಕೆ.ಜಿ.ಎಫ್ ತಾಲ್ಲೂಕು ಆಡಳಿತ ಮತ್ತು ಬೇತಮಂಗಲ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ, ‘ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ-2026’ ಕಾರ್ಯಕ್ರಮದ ಅಂಗವಾಗಿ ಬೇತಮಂಗಲದಲ್ಲಿ ಬೃಹತ್ ಜಾಗೃತಿ ಜಾಥಾ ಮತ್ತು ವಿಕಲಚೇತನರ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ದಂಡಾಧಿಕಾರಿಗಳಾದ ಭರತ್ ಜೆ. ಅವರು ಮಾತನಾಡಿ “ಕಳೆದ 2002ರ ನಂತರ ಅಂದರೆ ಸುಮಾರು 24 ವರ್ಷಗಳ ಬಳಿಕ ಈ ರೀತಿಯ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಬೋಗಸ್ ಅಂದರೆ ನಕಲಿ ಮತಗಳು ಇರಬಾರದು ಮತ್ತು ಪ್ರತಿಯೊಬ್ಬ ಅರ್ಹ ಪ್ರಜೆಗೂ ಮತದಾನದ ಹಕ್ಕು ಸಿಗಬೇಕು ಎನ್ನುವುದೇ ಇದರ ಮುಖ್ಯ ಉದ್ದೇಶವಾಗಿದೆ ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು” ಎಂದು ಕರೆ ನೀಡಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶಪ್ಪ ಅವರು ಮಾತನಾಡಿ, “ಈ ಪ್ರಕ್ರಿಯೆಯು 30 ಜೂನ್ 2026 ರಿಂದ 29 ಜುಲೈ 2026ರ ವರೆಗೆ ನಿಗದಿತ ಕಾಲಮಿತಿಯಲ್ಲಿ ನಡೆಯಲಿದ್ದು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇರುವುದಿಲ್ಲ. ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನಮೂನೆಗಳನ್ನು ನೀಡಲಿದ್ದಾರೆ. ಒಂದು ವೇಳೆ ಸಾರ್ವಜನಿಕರು ಸಿಗದಿದ್ದರೆ ಒಟ್ಟು ಮೂರು ಬಾರಿ ಅಧಿಕಾರಿಗಳು ಮನೆಗೆ ಭೇಟಿ ನೀಡಿ ನೋಟಿಸ್ ಅಂಟಿಸಲಿದ್ದಾರೆ. ಮತದಾರರು ನಮೂನೆಯಲ್ಲಿ ಸಹಿ ಮಾಡುವುದು ಕಡ್ಡಾಯವಾಗಿದ್ದು, ಉದಾಸೀನತೆ ತೋರಿದರೆ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಅವರು ಮಾತನಾಡಿ”ನಮ್ಮ ಶಿಕ್ಷಣ ಇಲಾಖೆಯ ಶಿಕ್ಷಕರು ಈ ರಾಷ್ಟ್ರೀಯ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ ಮತ್ತು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಶಾಲಾ ಅವಧಿಯ ಮುನ್ನ ಮತ್ತು ನಂತರ ಅಂದರೆ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸುತ್ತಿರುವ ಶಿಕ್ಷಕರಿಗೆ ಸಾರ್ವಜನಿಕರು ಅಗತ್ಯ ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ದಾಖಲೆಗಳನ್ನು ನೀಡಿ ಪೂರ್ಣ ಸಹಕಾರ ನೀಡಬೇಕು” ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ತ್ಯಾಗರಾಜ್,ಉಪ ತಹಸಿಲ್ದಾರ್ ಜಯರಾಮ್, ಆರ್ ಐ ಮುನಿವೆಂಕಟಪ್ಪ, ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್, ಕಾಯ9ದಶಿ9 ರಾಜಣ್ಣ, ಬಿಲ್ ಕಲೆಕ್ಟರ್ ರಾಮಪ್ಪ, ಸೋಮಪ್ಪ, ಶಿಕ್ಷಕರಾದ ಶಂಕರಪ್ಪ, ಉಸೇನ್ ಮುಬಾರಕ್, ನಾಗೇಶ್, ಲಕ್ಷ್ಮೀನಾರಾಯಣ್ ,ರಾಜು, ಮಾಜಿ ಸದಸ್ಯರಾದ ಶೇಷಾದ್ರಿ, ಮಂಜುನಾಥ್, ಅರಬಿನಾ ತಾಜ್ , ಹಾಗೂ ಬೇತಮಂಗಲ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಉಪನಿರೀಕ್ಷಕರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು, ವಿಕಲಚೇತನರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವಿಕಲಚೇತನರ ವಿಶೇಷ ದ್ವಿಚಕ್ರ ವಾಹನಗಳ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ



