ಗೌರಿಬಿದನೂರು: ಕ್ಷುಲ್ಲಕ ಕಾರಣಕ್ಕೆ ದೊಡ್ಡಪ್ಪನನ್ನೇ ತಮ್ಮ ಮಗ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನಗರಗೆರೆ ಹೋಬಳಿಯ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಸೋಮುವಾರ ಬೆಳಿಗ್ಗೆ 7-30ರಲ್ಲಿ ಜರುಗಿದೆ.
ರಾಮಕೃಷ್ಣಪ್ಪ(52) ತನ್ನ ತಮ್ಮನ ಮಗನಿಂದಲೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ, ನಾಗರಾಜು(38) ಕೊಲೆ ಮಾಡಿರುವ ವ್ಯಕ್ತಿ ಪರಾರಿಯಾಗಿದ್ದಾನೆ.ನಡೆದಿದ್ದೇನು?: ಮೃತ ರಾಮಕೃಷ್ಣಪ್ಪನ ತಮ್ಮ ನಾರಾಯಣಸ್ವಾಮಿ ಮಗ ನಾಗರಾಜು ಕಾಡು ಹಂದಿಗಳನ್ನು ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ವಿಚಾರವನ್ನು ರಾಮಕೃಷ್ಣಪ್ಪ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾನೆ ಎಂಬ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಭಾನುವಾರ ರಾತ್ರಿ ನಾಗರಾಜು ಕುಡಿದು ಗಲಾಟೆ ಮಾಡಿದ್ದಾನೆ.
ಬೆಳಿಗ್ಗೆ ರಾಮಕೃಷ್ಣಪ್ಪ ಹಾಲು ಹಾಕಲು ಡೇರಿಗೆ ಹೋಗಿದ್ದಾಗ ಡೇರಿಯ ಮುಂದೆಯೇ ಜನ ನೋಡು ನೋಡುತ್ತಿದ್ದಂತೆ ಮಚ್ಚಿನಿಂದ ಕುತ್ತಿಗೆಗೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.ಸುದ್ದಿ ತಿಳಿದ ತಕ್ಷಣ ಜಿಲ್ಲಾ ಎಸ್ಪಿ ಡಿ.ಎಲ್.ನಾಗೇಶ್ , ವೃತ್ತನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಎಸ್ಸೈ ರಮೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ.