ಚಿಕ್ಕಬಳ್ಳಾಪುರ: ದೈಹಿಕ ಧೃಡತೆ, ಮಾನಸಿಕ ಆರೋಗ್ಯ, ಭಾವನಾತ್ಮಕ ಸ್ಥಿರತೆ ಹಾಗೂ ಆಧ್ಯಾತ್ಮಿಕ ಸಾಧನೆಯು ಒಂದೇ ಕಡೆ ದೊರಕುವ ಜಗತ್ತಿನ ಏಕೈಕ ಮಾರ್ಗ ಎಂದರೆ ಅದು ಭಾರತೀಯ ಯೋಗ ಜೀವನ ಪದ್ಧತಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ಹೇಳಿದರು. ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತವು ವಿಶ್ವಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗವೂ ಒಂದು ಪ್ರಮುಖ ಪರಂಪರೆಯಾಗಿದ್ದು, ಅದರ ಮಹತ್ವವನ್ನು ಗುರುತಿಸಿದ ವಿಶ್ವ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ಅವರು ತಿಳಿಸಿದರು.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ,ಅದು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸುವ ಸಮಗ್ರ ಜೀವನಶೈಲಿಯಾಗಿದೆ.
ಇಂದಿನ ವೇಗದ ಬದುಕಿನಲ್ಲಿ ಮಾನಸಿಕ ಒತ್ತಡ, ಆತಂಕ ಹಾಗೂ ಆಧುನಿಕ ಜೀವನಶೈಲಿ ಸಂಬAಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೋಗದ ಅಗತ್ಯ ಇನ್ನಷ್ಟು ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಕರೆ ನೀಡಿದರು. ಯೋಗದಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗುವುದರ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಶಿಸ್ತು ಬೆಳೆಯುತ್ತದೆ.ಯೋಗವು ತಾಳ್ಮೆ, ಸಹನೆ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಯೋಗವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಕುಟುಂಬ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಯೋಗವನ್ನು ಒಂದು ದಿನದ ಆಚರಣೆಗೆ ಮಾತ್ರ ಸೀಮಿತಗೊಳಿಸದೆ, ಪ್ರತಿನಿತ್ಯದ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೆ ಉತ್ತಮ ಆರೋಗ್ಯದ ಜೊತೆಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಸಮತೋಲನವೂ ಲಭಿಸುತ್ತದೆ. ಇಂತಹ ಅಭ್ಯಾಸವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಜವಾಬ್ದಾರಿಯುತ ನಾಗರಿಕತೆಯನ್ನು ಬೆಳೆಸಲು ನೆರವಾಗುತ್ತದೆ ಎಂದು ತಿಳಿಸಿದರು.ಆರೋಗ್ಯಕರ ಜೀವನಶೈಲಿಗೆ ಸಿರಿಧಾನ್ಯಗಳ ಬಳಕೆ ಅತ್ಯಂತ ಅಗತ್ಯ, ನಾರಿನಾಂಶ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಮಧುಮೇಹ, ಸ್ಥೂಲಕಾಯ ಮತ್ತು ಹೃದಯ ಸಂಬAಧಿ ಸಮಸ್ಯೆಗಳ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ ಸಾರ್ವಜನಿಕರು ತಮ್ಮ ದೈನಂದಿನ ಆಹಾರದಲ್ಲಿ ರಾಗಿ, ನವಣೆ, ಸಜ್ಜೆ, ಸಾಮೆ, ಊದಲು ಮುಂತಾದ ಸಿರಿಧಾನ್ಯಗಳನ್ನು ಸೇರಿಸಿಕೊಳ್ಳಬೇಕು ಸಿರಿಧಾನ್ಯಗಳ ಬಳಕೆಯಿಂದ ಪೌಷ್ಟಿಕ ಆಹಾರದ ಭದ್ರತೆ ಹೆಚ್ಚುವುದರ ಜೊತೆಗೆ ಪರಿಸರ ಸ್ನೇಹಿ ಕೃಷಿಗೂ ಉತ್ತೇಜನ ಸಿಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಯುವಜನರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಯೋಗದ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ವಿವಿಧ ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ಪ್ರಾತ್ಯಕ್ಷಿಕೆಗಳನ್ನು ಒಂದು ಗಂಟೆ ಕಾಲ ನಡೆಸಲಾಯಿತು.ಬಯಲು ಕ್ರೀಡಾಂಗಣದಲ್ಲಿ ಅದ್ದೂರಿ ವೇದಿಕೆಯನ್ನು ನಿರ್ಮಾಣ ಮಾಡಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೊಟ್ಟಮೊದಲ ಬಾರಿಗೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಪತಂಜಲಿ ಯೋಗ ಸಂಸ್ಥೆಯ ಜಿ. ಗೋವಿಂದ್,ಯೋಗ ಗುರುಗಳಾದ ಲೋಕನಾಥ್, ನಾಗರಾಜ್ ರವರು ಯೋಗ ಮಾಡುವ ವಿಧಾನವನ್ನು ಲಯಬದ್ದವಾಗಿ ಹಾಗೂ ಪ್ರಾಯೋಗಿಕವಾಗಿ ಹೇಳಿಕೊಟ್ಟರು.ಹಿರಿಯ ದೈಹಿಕ ಶಿಕ್ಷಕ ಮಾರುತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ. ಎಚ್. ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ. ಎಲ್. ಸುಂದರರಾಜ್, ತಹಸೀಲ್ದಾರ್ ರಶ್ಮಿ, ಪತಂಜಲಿ ಯೋಗ ಸಂಸ್ಥೆಯ ಜಿ. ಗೋವಿಂದ್,ಯೋಗ ಗುರುಗಳಾದ ಲೋಕನಾಥ್, ನಾಗರಾಜ್, ವೀಣಾ ಲೋಕನಾಥ್, ಮುನಿರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಯೋಗ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ದೈಹಿಕ,ಮಾನಸಿಕ ಆರೋಗ್ಯಕ್ಕೆ ಭಾರತೀಯ ಯೋಗವೇ ಶ್ರೇಷ್ಠ ಮಾರ್ಗ: ಜಿಲ್ಲಾಧಿಕಾರಿ ಜಿ. ಪ್ರಭು



