ಕೋಲಾರ: “ಮನುಷ್ಯ ಈ ಜಗತ್ತಿನಲ್ಲಿ ತ್ಯಾಜ್ಯದ ಅತಿದೊಡ್ಡ ಉತ್ಪಾದಕ. ವಾಸ್ತವದಲ್ಲಿ ಕಸವು ನಮಗೆ ಸವಾಲೋ ಅಥವಾ ಸಮಸ್ಯೆಯೋ ಅಲ್ಲ; ಕಸವನ್ನು ವಿಲೇವಾರಿ ಮಾಡುವಲ್ಲಿನ ಜನರ ಮನಸ್ಥಿತಿ ದೊಡ್ಡ ಸಮಸ್ಯೆಯಾಗಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಪೌರಕಾರ್ಮಿಕರ ಅಥವಾ ನಗರಸಭೆಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ” ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಪ್ರತಿಪಾದಿಸಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ, ಕೋಲಾರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ “ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026ರ ಅನುಷ್ಠಾನ” ಕುರಿತ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಕಳೆದ ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ, ಸುಪ್ರೀಂ ಕೋರ್ಟ್ ಹಾಗೂ ಹಸಿರು ನ್ಯಾಯಾಧಿಕರಣದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಅವರು ಎಚ್ಚರಿಸಿದರು. ಹಿಂದೆ ತ್ಯಾಜ್ಯವನ್ನು ಎರಡು ರೀತಿಯಾಗಿ ವಿಂಗಡಿಸಲಾಗುತ್ತಿತ್ತು, ಆದರೆ ಹೊಸ ನಿಯಮಗಳ ಅನ್ವಯ ತ್ಯಾಜ್ಯವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಬೇಕು:ಹಸಿ ಕಸ (ಕಾಂಪೋಸ್ಟ್ ಮಾಡಬಹುದಾದ ತ್ಯಾಜ್ಯ)ಒಣ ಕಸ (ಮರುಬಳಕೆ ಮಾಡಬಹುದಾದ ತ್ಯಾಜ್ಯ)ಹಾನಿಕಾರಕ/ವಿಷಕಾರಿ ತ್ಯಾಜ್ಯ Toxic waste) ¸ (Sanitary waste)
ಸಾರ್ವಜನಿಕರಲ್ಲಿ ಸ್ಯಾನಿಟರಿ ತ್ಯಾಜ್ಯದ ಬಗ್ಗೆ ಅರಿವಿನ ಕೊರತೆ ಎದ್ದುಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿರುವ ‘ಸ್ವಚ್ಛ ಗೆಳತಿ’ ಮಾದರಿಯನ್ನು ಉಲ್ಲೇಖಿಸಿದರು. ಪ್ರೌಢಾವಸ್ಥೆಯ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ನಗರ ಸ್ಥಳೀಯ ಸಂಸ್ಥೆಗಳು ‘ಮೆಂಟರ್ ಸಿಸ್ಟಮ್’ (ಮಾರ್ಗದರ್ಶಕ ವ್ಯವಸ್ಥೆ) ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.ಕೋಲಾರ ಜಿಲ್ಲೆಯಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಮೂಲಕ ಉತ್ತಮ ಸಾಧನೆ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ 250 ಟನ್ ಜೈವಿಕ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗಿದ್ದು, ಇದರಿಂದ ಸುಮಾರು 6 ಲಕ್ಷ ರೂ. ಆದಾಯ ಗಳಿಸಲಾಗಿದೆ. ಈ ಅತ್ಯುತ್ತಮ ಕಾರ್ಯಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೋಲಾರ ಜಿಲ್ಲಾಡಳಿತವನ್ನು ಶ್ಲಾಘಿಸಿದ್ದಾರೆ ಎಂದು ಡಾ. ರವಿ ಸಂತಸ ಹಂಚಿಕೊಂಡರು.ಪ್ರಸ್ತುತ ಜಿಲ್ಲೆಯಲ್ಲಿ ಶೇ. 90-91 ರಷ್ಟು ಮಾತ್ರ ಮನೆ-ಮನೆಯಿಂದ ಕಸ ಸಂಗ್ರಹವಾಗುತ್ತಿದೆ. ಉಳಿದ ಶೇ. 10ರಷ್ಟು ಮನೆಗಳ ತ್ಯಾಜ್ಯ ರಸ್ತೆ, ಬೀದಿ ಮೂಲೆಗಳಿಗೆ ಸೇರುತ್ತಿದೆ. ಕಸದ ವಾಹನ ಬಂದಾಗ ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ನೀಡುವುದು ಕಡ್ಡಾಯವಾಗಬೇಕು.ಜಿಲ್ಲೆಯಲ್ಲಿ ಗುರುತಿಸಲಾಗಿದ್ದ 231 ‘ಬ್ಲ್ಯಾಕ್ ಸ್ಪಾಟ್’ಗಳ (ಕಸದ ರಾಶಿ ಬೀಳುವ ಸ್ಥಳಗಳು) ಪೈಕಿ, ಈಗಾಗಲೇ 134 ಸ್ಥಳಗಳನ್ನು ಸ್ವಚ್ಛಗೊಳಿಸಿ ‘ಬ್ಯೂಟಿ ಸ್ಪಾಟ್’ಗಳಾಗಿ ಪರಿವರ್ತಿಸಲಾಗಿದೆ. ಎಂದರು.ಜಿಲ್ಲೆಯಲ್ಲಿ 59 ಬೃಹತ್ ತ್ಯಾಜ್ಯ ಉತ್ಪಾದಕರನ್ನು (Bulk Waste Generators – ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು ಇತ್ಯಾದಿ) ಗುರುತಿಸಲಾಗಿದ್ದು, ಅವರು ತಮ್ಮ ತ್ಯಾಜ್ಯವನ್ನು ತಾವೇ ಸ್ವತಃ ಸಂಸ್ಕರಿಸಿ ವಿಲೇವಾರಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. “ಶಿಕ್ಷಣ, ಜಾಗೃತಿ ಕೇವಲ ಸಭೆಗಳಿಗೆ ಸೀಮಿತವಾಗಬಾರದು, ಅದು ಪ್ರತಿಯೊಂದು ಮನೆಯಿಂದ ಪ್ರಾರಂಭವಾಗಬೇಕು. ಸ್ವಚ್ಛತೆ ಎಂಬುದು ಮನುಷ್ಯನ ದೈನಂದಿನ ಜೀವನದ ಮೌಲ್ಯವಾಗಬೇಕು. ಕಸವನ್ನು ಮನೆಯಲ್ಲಿಯೇ ವಿಂಗಡಿಸಿ ಕೊಡುವ ಸಂಸ್ಕೃತಿ ಬೆಳೆದಾಗ ಮಾತ್ರ ನಮ್ಮ ನಗರಗಳು ನೈರ್ಮಲ್ಯದಿಂದ ಕೂಡಿರಲು ಸಾಧ್ಯ. ಈ ನಿಟ್ಟಿನಲ್ಲಿ ಕಮ್ಯುನಿಟಿ ಮೊಬಲೈಸರ್ಸ್ (ಸಮುದಾಯ ಸಂಘಟಕರು) ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು” ಎಂದು ಡಾ. ಎಂ.ಆರ್. ರವಿ ಕರೆ ನೀಡಿದರು.ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ 2026ರ ಪರಿಷ್ಕೃತ ನಿಯಮಗಳ ಅನ್ವಯ, ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಧಗಳಲ್ಲಿ ವಿಂಗಡಿಸಿ ನೀಡಬೇಕು. ಹೊಸ ನಿಯಮಗಳ ಕುರಿತಂತೆ ಜಿಲ್ಲಾಧಿಕಾರಿಗಳು ಸಹಿ ಮಾಡಿರುವ ಕಿರುಹೊತ್ತಿಗೆಯನ್ನು (ಬುಕ್ಲೆಟ್) ಪ್ರತಿ ಮನೆಗೂ ತಲುಪಿಸಿ, ಕಡ್ಡಾಯವಾಗಿ ಮನೆಯವರಿಂದ ಸಹಿ ಪಡೆಯಲಾಗುವುದು. ಒಮ್ಮೆ ಸಹಿ ಮಾಡಿದ ನಂತರವೂ ನಿಯಮ ಉಲ್ಲಂಘಿಸಿ ಕಸ ವಿಂಗಡಿಸದೆ ನೀಡಿದರೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೊಸ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.ಇನ್ನು ಮುಂದೆ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಕೇವಲ ‘ಕಸದವರು’ ಎಂದು ನೋಡದೆ, ಸಾರ್ವಜನಿಕರೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸುವ ‘ಕಸದ ಮೇಸ್ತ್ರಿ’ ಅಥವಾ ‘ಪೊಲೀಸ್’ ಎಂಬ ಜವಾಬ್ದಾರಿಯುತ ಪಾತ್ರದಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಕಸ ವಿಂಗಡಣೆ ಮಾಡಲು ನಿರಾಕರಿಸಿದರೆ, ಆಯಾ ವಾರ್ಡ್ಗಳ ಹೆಲ್ತ್ ಇನ್ಸ್ಪೆಕ್ಟರ್ ಅಥವಾ ಕಮಿಷನರ್ ಅವರ ಗಮನಕ್ಕೆ ತಂದು ದಂಡ ವಿಧಿಸುವ ವ್ಯವಸ್ಥೆ ಮಾಡಲಾಗುವುದು.
2006ರಲ್ಲಿ ಅಲ್ಮಿತ್ರಾ ಪಟೇಲ್ ಅವರ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಮೊದಲ ಬಾರಿಗೆ ನಿಯಮಗಳು ಬಂದವು. ತದನಂತರ 2016ರಲ್ಲಿ ಕಸಮುಕ್ತ ನಗರ, ಬಿನ್-ಲೆಸ್ ಸಿಟಿ ಮತ್ತು ಮನೆಮನೆ ಕಸ ಸಂಗ್ರಹಣೆಯ ನಿಯಮಗಳು ಜಾರಿಯಾದರೂ, ಸಾರ್ವಜನಿಕರ ಹಾಗೂ ಸಿಬ್ಬಂದಿಯ ಅಸಹಕಾರದಿಂದ ಅದು ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಇದೀಗ ಎನ್ಜಿಟಿ (ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್) ಮತ್ತು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದರಿಂದ 2026ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿ ಮಾಡಲೇಬೇಕಿದೆ.
ತಳ್ಳುಗಾಡಿ ಚಾಲಕರಿಂದ ಹಿಡಿದು ಪೌರಾಯುಕ್ತರವರೆಗೆ ಎಲ್ಲರಿಗೂ ಹಂತ-ಹಂತವಾಗಿ ತರಬೇತಿ ನೀಡಲಾಗುತ್ತಿದೆ. ಈ ಯೋಜನೆಯ ಪ್ರಗತಿಯ ಕುರಿತು ಪ್ರತಿ 15 ದಿನಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ.ಚಿನ್ನದ ನಾಡು ಕೋಲಾರ ಜಿಲ್ಲೆಯನ್ನು ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಇಡೀ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ಕರೆ ನೀಡಿದರು.
ಕಾರ್ಯಾಗಾರದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಅನುಷಾ, ವಿ.ಎಂ.ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ (DUDC), ವಿವಿಧ ನಗರಸಭೆ, ಪುರಸಭೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಘನತ್ಯಾಜ್ಯ ನಿರ್ವಹಣೆ: ಕಸ ಸಮಸ್ಯೆಯಲ್ಲ, ಜನರ ಮನಸ್ಥಿತಿ ಬದಲಾಗಬೇಕು; ಜಿಲ್ಲಾಧಿಕಾರಿ



