ಇಂದು ನಾವು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾದ ಕಾರ್ಗಿಲ್ ವಿಜಯ್ ದಿವಸವನ್ನು ಸ್ಮರಿಸಲು ಇಲ್ಲಿ ಸೇರಿದ್ದೇವೆ.
ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಭಾರತೀಯ ಸೈನಿಕರು ಅಪಾರ ಧೈರ್ಯ, ಶೌರ್ಯ ಮತ್ತು ತ್ಯಾಗದಿಂದ ದೇಶದ ಭೂಭಾಗವನ್ನು ರಕ್ಷಿಸಿ ವಿಜಯ ಸಾಧಿಸಿದರು.ಕಾರ್ಗಿಲ್ ಯುದ್ಧ ನಡೆದ ಪ್ರದೇಶವು ಅತ್ಯಂತ ದುರ್ಗಮವಾದ ಹಿಮಾವೃತ ಪರ್ವತ ಪ್ರದೇಶವಾಗಿತ್ತು. ಸಾವಿರಾರು ಅಡಿ ಎತ್ತರ, ತೀವ್ರ ಚಳಿ, ಆಮ್ಲಜನಕದ ಕೊರತೆ ಮತ್ತು ಶತ್ರುಗಳ ದಾಳಿಯ ನಡುವೆಯೂ ನಮ್ಮ ಸೈನಿಕರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ.
ಶತ್ರುಗಳು ಎತ್ತರದ ಪ್ರದೇಶಗಳಲ್ಲಿ ನೆಲೆಸಿದ್ದರೂ, ನಮ್ಮ ಸೈನಿಕರು ಕೆಳಭಾಗದಿಂದ ಪರ್ವತಗಳನ್ನು ಏರಿ ಹೋರಾಡಿದರು. ಪ್ರತಿಯೊಂದು ಹೆಜ್ಜೆಯಲ್ಲೂ ಅಪಾಯವಿದ್ದರೂ, ಅವರ ಮನಸ್ಸಿನಲ್ಲಿ ಒಂದೇ ಸಂಕಲ್ಪವಿತ್ತು.
“ದೇಶದ ಭೂಮಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ.”ಎಂದು.
ಭಾರತೀಯ ಸೇನೆಯ ಆಪರೇಷನ್ ವಿಜಯ್ ಕಾರ್ಯಾಚರಣೆಯ ಮೂಲಕ ಅನೇಕ ಪ್ರಮುಖ ಪರ್ವತ ಶಿಖರಗಳನ್ನು ಮರಳಿ ವಶಪಡಿಸಿಕೊಳ್ಳಲಾಯಿತು. ಟೈಗರ್ ಹಿಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರತೀಯ ಸೈನಿಕರು ಅಪ್ರತಿಮ ಶೌರ್ಯ ಪ್ರದರ್ಶಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ರೈಫಲ್ಮ್ಯಾನ್ ಸಂಜಯ್ ಕುಮಾರ್ ಸೇರಿದಂತೆ ಅನೇಕ ವೀರ ಸೈನಿಕರು ತಮ್ಮ ಶೌರ್ಯದಿಂದ ದೇಶದ ಗೌರವವನ್ನು ಎತ್ತಿಹಿಡಿದರು. ಹಲವಾರು ಯೋಧರು ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.
ನಾವು ಇಂದು ನೆಮ್ಮದಿಯಿಂದ ಬದುಕುತ್ತಿದ್ದೇವೆ. ನಮ್ಮ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ನಿದ್ರಿಸುತ್ತಿದ್ದೇವೆ. ಇದರ ಹಿಂದೆ ನಮ್ಮ ಗಡಿಯಲ್ಲಿ ಹಗಲು-ರಾತ್ರಿ ಕಾವಲು ಕಾಯುತ್ತಿರುವ ಸೈನಿಕರ ತ್ಯಾಗವಿದೆ.
ಆದ್ದರಿಂದ ಸೈನಿಕರನ್ನು ಗೌರವಿಸುವುದು ಎಂದರೆ ಕೇವಲ ಒಂದು ದಿನ ಅವರನ್ನು ನೆನಪಿಸಿಕೊಳ್ಳುವುದಲ್ಲ. ಅವರ ತ್ಯಾಗವನ್ನು ಅರ್ಥಮಾಡಿಕೊಂಡು, ದೇಶದ ಬಗ್ಗೆ ಜವಾಬ್ದಾರಿಯುತ ನಾಗರಿಕರಾಗುವುದು ನಿಜವಾದ ಗೌರವವಾಗಿದೆ.
ಕಾರ್ಗಿಲ್ ವಿಜಯ್ ದಿವಸ್ ನಮಗೆ ಮೂರು ಮಹತ್ವದ ಸಂದೇಶಗಳನ್ನು ನೀಡುತ್ತದೆ.
ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ರಾಷ್ಟಿçÃಯ ಏಕತೆ.
ಇಂದಿನ ಯುವಜನತೆ ನಮ್ಮ ಸೈನಿಕರ ಜೀವನದಿಂದ ಶಿಸ್ತು, ಧೈರ್ಯ, ಪರಿಶ್ರಮ ಮತ್ತು ದೇಶಪ್ರೇಮವನ್ನು ಕಲಿಯಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು.
ಕೊನೆಗೆ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ.
ವೀರ ಸೈನಿಕರಿಗೆ ಶತಕೋಟಿ ನಮನಗಳು!
ಭಾರತ ಮಾತಾ ಕೀ ಜೈ!
ಜೈ ಹಿಂದ್!
– ಡಾ. ಜಿ. ವೈ. ಪದ್ಮ ನಾಗರಾಜ್
ವ್ಯವಸ್ಥಾಪಕ ಸಂಪಾದಕರು ಇಂದು ಸಂಜೆ ಪತ್ರಿಕೆ
ಕಾರ್ಗಿಲ್ ವಿಜಯ ದಿನ… ಜನಜಾಗೃತಿಯ ಜನಗಣಮನ”



