ನನ್ನ ಮಗ ಮನೋಜ್ ಕೂಡ ಇಂತಹದ್ದೇ ಪ್ರಕ್ರಿಯೆಯ ಮೂಲಕ ವಿಫಲಗೊಂಡಿದ್ದರಿಂದ, ವಿದ್ಯಾರ್ಥಿಗಳು ಎದುರಿಸಬಹುದಾದ ಒತ್ತಡ ಮತ್ತು ಆತಂಕದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ.ಇಂತಹ ಪರೀಕ್ಷಾ ಪತ್ರಿಕೆಗಳನ್ನು ಯಾವುದೇ ಶ್ರಮ ಇಲ್ಲದೆ, ಸುಲಭವಾಗಿ ಪಡೆದಿದ್ದು ನಿಜಕ್ಕೂ ಅನಮಾನಕರ ಸಂಗತಿ. ಇಂತಹ ಕೃತ್ಯಗಳು ನಡೆಯುವ ಮೂಲಕ ವ್ಯವಸ್ಥೆಯ ಸಿಂಧುತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಸೃಷ್ಟಿಸಿದೆ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪೋಷಕರು ಮತ್ತು ವಂಚನೆಗೊಳಗಾದ ವಿದ್ಯಾರ್ಥಿಗಳು ದೆಹಲಿಗೆ ದಂಡೆತ್ತಿ ಹೊಗಿದ್ದಾರೆ.ನನ್ನದೊಂದು ಪ್ರಶ್ನೆ ಇದೆ. ಅದು ವಿದ್ಯಾರ್ಥಿಗಳೇ, ನಿಮ್ಮದಲ್ಲದ ತಪ್ಪಿಗೆ ನೀವು ನಿಮ್ಮ ಜೀವನವನ್ನು ಕೊನೆಗೊಳಿಸಲು ಕಾರಣವೇನು? ನಿಮ್ಮ ಬಹು ವರ್ಷಗಳ ಕಠಿಣ ಪರಿಶ್ರಮ ವ್ಯರ್ಥವಾಯಿತು ಎಂಬುದು ನಮಗೆಲ್ಲರಿಗೂ ಅರ್ಥವಾಗಿದೆ. ನಿಮ್ಮ ಕನಸುಗಳು ಚೂರುಚೂರಾಗಿ ಛಿದ್ರವಾಗುತ್ತಿದೆ. ಇದ್ದಕ್ಕಿದ್ದಂತೆ ನೀವು ಕತ್ತಲೆಯಲ್ಲಿ ಸಿಲುಕಿಕೊಂಡಂತೆ ಭಾಸವಾಗುತ್ತಿದೆಯೇ? ನೀಟ್ ನಿಂದಾಚೆಗೂ ಬದುಕಿಲ್ಲ ಎಂದು ನಿಮಗೆ ಯಾರು ಹೇಳಿದರು? ಇದೇ ಬದುಕಿನ ಪಯಣದ ಅಂತ್ಯ ಎಂದು ಯಾರು ನಿಮ್ಮ ಮನವೊಲಿಸಿದರು? ನಾನು ಆಗಾಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಅಂಕಿಅAಶಗಳು ಸೂಚಿಸುವಂತೆ ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 14 ರಿಂದ 15 ಮಿಲಿಯನ್ ಆತ್ಮಹತ್ಯಾ ಪ್ರಯತ್ನಗಳು ನಡೆಯುತ್ತಿವೆ. ಅವುಗಳಲ್ಲಿ ಸುಮಾರು 7,20,000 ಸಾವುಗಳು ಜರಗುವ ಮೂಲಕ ಕೊನೆಗೊಳ್ಳುತ್ತಿವೆ. ಜೀವನದ ಪಯಣ ದೊಡ್ಡದಿರುವಾಗ ಸಾವನ್ನು ಆರಿಸಿಕೊಳ್ಳುವುದು ಎಂದಿಗೂ ಉಚಿತವಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ “ಯಶಸ್ಸು” ಗಳಿಸಿದರೆಂದು ಹೇಳಲು ಹೋಗುವುದಿಲ್ಲ.”ಭವಿಷ್ಯ” ಕತ್ತಲೆಯಾಗಿ ಕಾಣಿಸಿಕೊಂಡರೂ, ಅದನ್ನು ಎದುರಿಸಿ, ಜೀವನದ ಹೊರೆಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕು. “ಸಾವು” ಸುಲಭವೆಂದು ಅದರ ಮೊರೆ ಹೋಗಬೇಡಿ. ಕಾಲ ಕಳೆದಂತೆ, ಭವಿಷ್ಯ ಮತ್ತಷ್ಟು ಕಠಿಣ ಹಾದಿಯಿಂದ ಕೂಡಿರಬಹುದು. ಹಾಗಂತ ಹತಾಶೆಯಲ್ಲಿ ಮುಳಗಬೇಡಿ. ಸದ್ಯ ನೀವು ನಡೆಸುತ್ತಿರುವ ಹೋರಾಟಗಳೇ ನಿಮ್ಮನ್ನು ಬಲಿಷ್ಠ ಮತ್ತು ಬುದ್ಧಿವಂತ ಮನುಷ್ಯರನ್ನಾಗಿ ರೂಪಿಸುತ್ತವೆ.ಗೊತ್ತಿರಲಿ, ನೀಟ್-ಯುಜಿ 2024, ಯುಜಿಸಿ-ನೆಟ್ 2024 ಮತ್ತು ಜೆಇಇ-ಮೇನ್ 2021ರಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಸಮಸ್ಯೆಗಳು ಕಂಡುಬಂದಿತ್ತು. 2024ರ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣವನ್ನು ಕೇಂದ್ರ ತನಿಖಾ ದಳ ತನಿಖೆ ನಡೆಸಿತ್ತಾದರೂ. ಇದುವರೆಗೂ, ತಪ್ಪಿತಸ್ಥರಿಗೆ ಏನಾಗಿದೆ. ಎಷ್ಟು ಜನರಿಗೆ ಶಿಕ್ಷೆಯನ್ನು ನೀಡಲಾಗಿದೆ ಎಂಬುದರ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರಿಗೂ ಗೊತ್ತಿಲ್ಲ. 2026ರ ಪ್ರಶ್ನೆಪತ್ರಿಕೆ ಸೋರಿಕೆಗೂ ಸಿಬಿಐ ಮತ್ತೆ ಅದೇ ಕಸರತ್ತು ನಡೆಸುತ್ತಿದೆ. ಮಾಧ್ಯಮ ವರದಿಗಳು ಇದರ ಹಿಂದಿರುವ ಪಿತೂರಿಯನ್ನು ಸ್ವಲ್ಪ ಮಟ್ಟಿಗೆ ಬಯಲು ಮಾಡಿವೆ.ಇವೆಲ್ಲವನ್ನೂ ಕಂಡ ನಂತರವಾ ದರೂ, ಶಾಲೆಯಿಂದ ಕಾಲೇಜಿನವರೆಗೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಪರ್ಯಾಸ ಎಂದರೆ, ಇವತ್ತು ವೃತ್ತಿಗಳಿಂದು, ವೃತ್ತಿಪರರಿಂದಾಗಿಯೇ ಧಕ್ಕೆಗೊಳಗಾಗುತ್ತಿದೆ. ಬಹುಪಾಲು ನಿಯಂತ್ರಕ ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ.ಇದೇನೆ ಇರಲಿ, 2026ರ ಮೇ 3ಕ್ಕೆ ನಿಗದಿಯಾಗಿದ್ದ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆಯಾಗಿ, ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಪೋಷಕರನ್ನು ಆತಂಕಕ್ಕೆ ದೂಡಿದೆ. ಹೀಗಾಗಿಯೇ ದೆಹಲಿಯ ಜಂತರ್ ಮಂಥರ್ ಮುಂದೆ ವಾಂಗ್ ಚುಕ್ ಮುಂದಾಳತ್ವದಲ್ಲಿ ಸೇರಿದ್ದಾರೆ. ಪೊಲೀಸರಿಂದ ಲಾಠಿ ಪ್ರಹಾರಕ್ಕೂ ಒಳಗಾಗಿದ್ದಾರೆ. ಇದರ ಬಗ್ಗೆ ಮತ್ತೊಮ್ಮೆ ಅಭಿವ್ಯಕ್ತಿಸುವುವೆ. 22.7ಲಕ್ಷ ಯುವ ಆಕಾಂಕ್ಷಿಗಳ ಸ್ಥಿತಿ ನಿಜಕ್ಕೂ ಆಘಾತಕಾರಿಯಾಗಿದೆ. ದೆಹಲಿಯಲ್ಲಿ ಅನ್ನ ನೀರು ನಿದ್ದೆಬಿಟ್ಟು ಪ್ರತಿಭಟನೆಯಲ್ಲಿ ತೊಡಗಿಕೊಂಡವರು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದು ಓದುವ ಕನಸನ್ನು ಊಹಿಸದವರು. ಪಾಪದ ಪೋಷಕರು, ತಮ್ಮ ಮಕ್ಕಳು ಬೋಧನಾ ಕೇಂದ್ರದ ಮೂಲಕ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಬರೆದು ಪರಿಣತಿ ಪಡೆಯಲೆಂಬ ಮಹಾದಾಸೆ ಹೊತ್ತಿರುತ್ತಾರೆ.
ನಮ್ಮಲ್ಲಿನ ನೀಟ್-ಯುಜಿ ವಿಶ್ವದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ನೀಟ್-ಯುಜಿ 2026ನ್ನು 551 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು 14 ಕಡೆ ವಿದೇಶಗಳಲ್ಲಿ, 5,400 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡರೆ, 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.ನಮ್ಮಲ್ಲಿ 800 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಲ್ಲಿ 1.28 ಲಕ್ಷಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳಿವೆ. ಇದಲ್ಲದೆ, ದಂತ ಮತ್ತು ಆಯುಷ್ ಕಾಲೇಜುಗಳಲ್ಲಿ ಸಾವಿರಾರು ಸೀಟುಗಳಿವೆ. ದೇಶವಾಸಿಗಳನ್ನು ಕಾಪಾಡಬೇಕಾದ ಆರೋಗ್ಯ ರಕ್ಷಣಾ ಕಾರ್ಯಪಡೆ ಇದೇ ಪರೀಕ್ಷೆಯ ಮೂಲಕ ರಚನೆಯಾಗುತ್ತದೆ. ನೀಟ್ ನಂತಹ ಪರೀಕ್ಷೆ ಪ್ರಾಮಾಣಿಕತೆ, ಅರ್ಹತೆ, ಶಿಸ್ತು ಮತ್ತು ಸಮಾನ ಅವಕಾಶಗಳನ್ನು ಪ್ರತಿಬಿಂಬಿಸಬೇಕು. ವಿದ್ಯಾರ್ಥಿಗಳು ಕೂಡ ತಾವು ಪಡುವ ಪ್ರಯತ್ನಗಳಿಗೆ ಮೌಲ್ಯವಿದೆ ಎಂಬುದನ್ನು ನಂಬಬೇಕು.
ಇತ್ತೀಚಿನ ಕೆಲವು ವರ್ಷಗಳಿಂದ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಗೆ ಸಂಬಂಧಿಸಿದ ಆರೋಪಗಳು ಪದೇ ಪದೇ ಕಳವಳಗಳನ್ನು ಹುಟ್ಟುಹಾಕಿರುವುದು ಸುಳ್ಳಲ್ಲ. ಸೋರಿಕೆ ಪ್ರಕರಣ ಸಾಬೀತಾಗಿರಲಿ ಅಥವಾ ತನಿಖೆ ನಡೆಯುತ್ತಿರಲಿ, ಸಾರ್ವಜನಿಕರ ನಂಬಿಕೆಯನ್ನAತೂ ಹಾನಿ ಮಾಡಿದೆ. ಅದರಲ್ಲೂ ಪೋಲಿಸರ ದರ್ಪ ದೌರ್ಜನ್ಯ ವಿದ್ಯಾರ್ಥಿಗಳ ಭಾವನಾತ್ಮಕತೆಗೆ ಬಹುದೊಡ್ಡ ಹಾನಿಯಾಗಿದೆ.ಮಕ್ಕಳ ಮೇಲಿನ ಹಲ್ಲೆ ಕಂಡು ಪೋಷಕರು ಸಹ ಒಳಗೊಳಗೆ ಮೌನ ರೋಧನೆ ಅನುಭವಿಸುತ್ತಿದ್ದಾರೆ.ಇನ್ನೂ ವೈದ್ಯಕೀಯ ಪದವಿಗೆ ತಯಾರಿ ನಡೆಸಬೇಕಾದ ವಿದ್ಯಾರ್ಥಿ ವೈದ್ಯಕೀಯ ಪದವಿ ಅಭ್ಯಸಿಸುವ ಮೊದಲೇ, ಖಿನ್ನತೆಯ ಭಾವನೆಯನ್ನು ಹೊರಬಾರದು. ಅಲ್ಲದೆ ವ್ಯವಸ್ಥೆಯ ಮೇಲೆ ಸಹ ನಂಬಿಕೆ ಕಳೆದುಕೊಳ್ಳಬಾರದು.ನಿಜ, ಇಷ್ಟೊಂದು ದೊಡ್ಡ ಪ್ರಮಾಣದ ಪರೀಕ್ಷೆಯನ್ನು ನಡೆಸುವುದು ಸುಲಭವಲ್ಲ. ಸಾವಿರಾರು ಕೇಂದ್ರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕೆಂದರೆ, ಅದಕ್ಕೆ ಅಪಾರವಾದ ಸಮನ್ವಯ, ಮಾನವಶಕ್ತಿ ಮತ್ತು ಭದ್ರತೆಯ ಅಗತ್ಯವಿರುತ್ತದೆ. ಪರೀಕ್ಷೆ ಸುಗಮವಾಗಿ ನಡೆಯಬೇಕೆಂದು ಪ್ರಮಾಣಿಕವಾಗಿ ತಮ್ಮ ಕೈಲಾದಷ್ಟು ಹತ್ತಾರು ಅಧಿಕಾರಿಗಳು, ಶಿಕ್ಷಕರು, ಆಡಳಿತಾಧಿಕಾರಿಗಳು ಶ್ರಮಿಸಿರುತ್ತಾರೆ. ಅವರ ಪ್ರಯತ್ನಗಳನ್ನು ನಾನಿಲ್ಲಿ ಮರೆಯುತ್ತಿಲ್ಲ.
ನೀಟ್ ವೈಫಲ್ಯ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ..!



