ಕುಣಿಗಲ್: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತ್ತೂರು ಹೋಬಳಿಯ ಐತಿಹಾಸಿಕ ಬೆಟ್ಟಹಳ್ಳಿ ಗ್ರಾಮದಲ್ಲಿರುವ ಮುಜುರಾಯಿ ಇಲಾಖೆಗೆ ಸೇರಿದ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ವಾರ್ಷಿಕ ಜಾತ್ರಾಮಹೋತ್ಸವ ಆಷಾಢ ಮಾಸದ ಪ್ರಯುಕ್ತ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು, ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದರು.ಪ್ರಥಮ ಏಕಾದಶಿ ಅಂಗವಾಗಿ ದೇವರ ಐದನೇ ವರ್ಷದ ತಿರುಕಲ್ಯಾಣೋತ್ಸವ ವಿಶೇಷವಾಗಿ ನೆರವೇರಿಸ ಲಾಯಿತು. ಶನಿವಾರ ಸಂಜೆ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಬೆಳಗಿನ ಜಾವದವರೆಗೂ ನಡೆದವು. ಮುಂಜಾನೆ ಶುಭ ಮುಹೂರ್ತದಲ್ಲಿ ಉತ್ಸವ
ಮೂರ್ತಿಗೆ ಪಂಚಾಮೃತಾಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಿ, ನಂತರ ಮಹಾಮಂಟಪದಲ್ಲಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸ ಲಾಯಿತು. ಶ್ರೀ ಚನ್ನಕೇಶವ ವೇದ ಗುರುಕುಲದ ಸಂಸ್ಥಾಪಕರಾದ ಶ್ರೀ ನಾರಾಯಣ ಆಚಾರ್ಯ ಅವರು ವೇದಮಂತ್ರ ಗಳ ಘೋಷದೊಂದಿಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಭಕ್ತರು ಭಕ್ತಿಭಾವದಿಂದ ಪೂಜೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಭಾನುವಾರ ನಡೆದ ಜಾತ್ರಾಮಹೋತ್ಸವದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಬಿಜೆಪಿ ಹಿರಿಯ ಮುಖಂಡ ರಾಜೇಶ್ ಗೌಡ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಪಂಚಾಯಿತಿ ಮಾಜಿ ಅಧ್ಯಕ್ಷರು, ಗ್ರಾಮದ ಹಿರಿಯರು ಹಾಗೂ ಗಣ್ಯರು ಜಾತ್ರೆಯಲ್ಲಿ ಉಪಸ್ಥಿತರಿದ್ದರು.ಜಾತ್ರೆಯ ಅಂಗವಾಗಿ ಪುಷ್ಪಾಲಂಕೃತ ಉತ್ಸವಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾಂಪ್ರದಾಯಿಕ ವಾದ್ಯಗಳ ನಿನಾದದ ನಡುವೆ ನಡೆದ ಮೆರವಣಿಗೆಯಲ್ಲಿ ಭಕ್ತರು ಜಯಘೋಷಗಳ ಮೂಲಕ ಭಕ್ತಿಭಾವ ಮೆರೆದರು.ಭಕ್ತರ ಮನರಂಜನೆಗಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಬೆಟ್ಟದ ಸನ್ನಿಧಿಯಲ್ಲಿ “ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ” ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು. ರಂಗಕಲಾರತ್ನ ಪ್ರಶಸ್ತಿ ಪುರಸ್ಕೃತ ಕಟ್ಟಿಗೇಹಳ್ಳಿ ಕೆ.ಆರ್. ನಾರಾಯಣ್ ಅವರ ನಿರ್ದೇಶನದಲ್ಲಿ, ಸ್ವರ್ಣಗೌರಿ ಡ್ರಾಮಾ ಸೀನ್ಸ್ ತಂಡದ ರಾವುತನಹಳ್ಳಿ ಆನಂದ್ ಆಚಾರ್ಯ ಅವರ ವಿನೂತನ ವಸ್ತ್ರಾಲಂಕಾರ, ಸಿನಿಮಾ ಮಾದರಿಯ ಭವ್ಯ ಸೆಟ್ಗಳು ಹಾಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ನಾಟಕಕ್ಕೆ ವಿಶೇಷ ಮೆರುಗು ನೀಡಿದವು. ಬೆಟ್ಟಹಳ್ಳಿ ಗ್ರಾಮದ ಹವ್ಯಾಸಿ ಯುವ ಕಲಾವಿದರು ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವಂತಹ ಅಭಿನಯ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.ಗ್ರಾಮೀಣ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಯುವಕರಿಗಾಗಿ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಮುಜುರಾಯಿ ಇಲಾಖೆ ಹಾಗೂ ಅಮೃತ್ತೂರು ಪೊಲೀಸ್ ಠಾಣೆ ವತಿಯಿಂದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇವಸ್ಥಾನ ಹಾಗೂ ಜಾತ್ರಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್, ವಾಹನ ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದೆ ಜಾತ್ರೆ ಶಾಂತಿಯುತವಾಗಿ ಸಂಪನ್ನಗೊಂಡಿತು.ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ವೈಭವ ಹಾಗೂ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನವಾಗಿರುವ ಬೆಟ್ಟಹಳ್ಳಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾಮಹೋತ್ಸವವು ಸಾವಿರಾರು ಭಕ್ತರಲ್ಲಿ ಭಕ್ತಿ-ಭಾವನೆ ಮೂಡಿಸಿ, ಗ್ರಾಮದ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.
ಭಕ್ತಿ-ಸಂಭ್ರಮದಿAದ ಕಂಗೊಳಿಸಿದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾಮಹೋತ್ಸವ ದರ್ಶನ ಪಡೆದ ಸಹಸ್ರಾರು ಭಕ್ತರು



