ಬೆಂಗಳೂರು: ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸ್ವಾವಲಂಭಿಗಳಷ್ಟೆ ಅಲ್ಲ, ಸಬಲರೂ ಆಗಬೇಕಿದೆ. ಮಹಿಳೆಯರ ಶ್ರೇಯೋಭಿವೃದ್ದಿಗಾಗಿಯೇ ಸರಕಾರ ರೂಪಿಸಿ, ಜಾರಿಗೊಳಿಸಿರುವ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷಿ÷್ಮ ಚೌಧರಿ ತಿಳಿಸಿದ್ದಾರೆ.ಶ್ರೀನಿವಾಸನಗರದ ಕಾಗಿನೆಲೆ ಕನಕ ಗುರುಪೀಠದ ಶಾಖಾ ಆವರಣದಲ್ಲಿ ಶ್ರೀ ಸಿದ್ಧರಾಮಾನಂದ ಮಾಹಾಸ್ವಾಮೀಜಿಗಳ ಸತ್ಸಂಗ ಸೇವಾ ಮಂಡಳಿ ಟ್ರಸ್ಟ್, ಅಹಲ್ಯಾಬಾಯಿ ಮಹಿಳಾ ಮತ್ತು ಮಕ್ಕಳ ಸಂಘ ಮತ್ತು ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ 301ನೇ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಲ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವ, ಜಗತ್ತಿನ ಬೇರ್ಯಾವುದೇ ದೇಶದಲ್ಲಿ ಇಲ್ಲ. ಆದರೂ, ದೇಶದಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುವ ಕುಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತದೆ. ಎಲ್ಲರೂ ಇದನ್ನು ತಡೆಗಟ್ಟಲು ಶ್ರಮಿಸಬೇಕಿದೆ. ಈ ನಾಡಿನಲ್ಲಿ ಮೂಢನಂಬಿಕೆಗಳಿಂದಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಕಾಗಿನೆಲೆ ಕನಕಗುರುಪೀಠದ ಕೆ.ಆರ್. ನಗರ ಶಾಖಾಮಠದ ಪೀಠಾಧಿಪತಿ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀ ಕಾಗಿನೆಲೆ ಕನಕಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ವಿದ್ವಾನ್ ಡಾ. ಸಿದ್ದೇಶ್ವರ ದೇವರು ಮರಿಕಟ್ಟಿ ಇನ್ನಿತರ ಗಣ್ಯರು ಕಾರ್ಯಕ್ರಮದ ವಹಿಸಿದ್ದರು.ವೀರಯೋಧರಿಗೆ ಅಭಿನಂದನೆ: ಕಾರ್ಯಕ್ರಮವು ಅಹಲ್ಯಾಬಾಯಿ ಮಹಿಳಾ ಮತ್ತು ಮಕ್ಕಳ ಸಂಘ ಅಧ್ಯಕ್ಷೆ ಸಿ. ಸ್ವರೂಪರಾಣಿ, ಶ್ರೀ ಸಿದ್ಧರಾಮಾನಂದ ಸ್ವಾಮೀಜಿಯವರ ಸತ್ಸಂಗ ಸೇವಾ ಮಂಡಳಿ ಟ್ರಸ್ಟ್ ಅಧ್ಯಕ್ಷೆ ವಿಜಯಕುಮಾರಿ ಆರ್. ಗೌಡ ನೇತೃತ್ವದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೂ ಮುನ್ನ ಮಲ್ಲೇಶ್ ನೇತೃತ್ವದ ಗೊರವರ ಕುಣಿತದ ತಂಡ ವಿಶೇಷವಾಗಿ ಗಣ್ಯರು ಬರಮಾಡಿಕೊಂಡಿತು. ಇದೇ ವೇಳೆ ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ವೀರಯೋಧರನ್ನು ಗೌರವಿಸಲಾಯಿತು. ನಂತರ ಸತ್ಸಂಗದಲ್ಲಿ ಶಿವನ ಆರಾಧನೆ ಎಲ್ಲರ ಕಣ್ಮರೆ ಸೆಳೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



