ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಪುರುಷರ 60 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಮಣಿಪುರದ ಕ್ರೀಡಾಪಟು ಋಷಿಕಾಂತ್ ಸಿಂಗ್ ಚನಂಬಮ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಸ್ನಾ÷್ಯಚ್ ವಿಭಾಗದಲ್ಲಿ ದಾಖಲೆಯ ಸಾಧನೆ ಮಾಡಿದ ಅವರು, ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದು ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಸ್ನಾ÷್ಯಚ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಋಷಿಕಾಂತ್, ಸತತವಾಗಿ 116 ಕೆಜಿ, 119 ಕೆಜಿ ಹಾಗೂ 121 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ನ ಹಳೆಯ ದಾಖಲೆಯನ್ನು ಸರಿಗಟ್ಟಿದರು. ಆದರೆ ಕ್ಲೀನ್ ಅಂಡ್ ಜರ್ಕ್ ವಿಭಾಗದ ಮೊದಲ ಯತ್ನದಲ್ಲಿ 143 ಕೆಜಿ ಎತ್ತಿದ ನಂತರ, 148 ಕೆಜಿ ಮತ್ತು 151 ಕೆಜಿ ಎತ್ತುವ ಮುಂದಿನ ಎರಡು ಯತ್ನಗಳಲ್ಲಿ ವಿಫಲರಾದರು. ಮಲೇಷ್ಯಾದ ಬಿನ್ ಕಾಸ್ಡಾನ್ ಮೊಹಮ್ಮದ್ ಅನೀಕ್ ಒಟ್ಟು 273 ಕೆಜಿ ಎತ್ತುವ ಮೂಲಕ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಕೀನ್ಯಾದ ಜೋಶುವಾ ಅಮುಂಗಾ ಮಬೋಯಾ (260 ಕೆಜಿ) ಕಂಸ್ಯ ಪದಕ ಪಡೆದರು. ಇಂಫಾಲ ಪಶ್ಚಿಮ ಜಿಲ್ಲೆಯವರಾದ ಋಷಿಕಾಂತ್ ಸಿಂಗ್, ಕಳೆದ 2025ರ ಅಹಮದಾಬಾದ್ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದು ಗ್ಲಾಸ್ಗೋಗೆ ಆಗಮಿಸಿದ್ದರು. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದ ಅವರು, ವೇಟ್ಲಿಫ್ಟಿಂಗ್ನಲ್ಲಿ ಭಾರತದ ಸುದೀರ್ಘ ಪದಕದ ಪರಂಪರೆಯನ್ನು ಮುಂದುವರಿಸಿದ್ದಾರೆ. ಇದು ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಸಬಲ ವಿಭಾಗದ ಪದಕವಾಗಿದೆ.



