ಬೆಂಗಳೂರು: ನಗರದ ‘ಪಂಚಾಮೃತ ಸುಗಮ ಸಂಗೀತ ಅಕಾಡಮಿ’ ವತಿಯಿಂದ ‘ಆಚಾರ್ಯತ್ರಯರು-ಕನ್ನಡ ಕವಿಗಳು ಕಂಡಂತೆ’ ಬಿಂದು 4′ ವರ್ಷದ ಸರಣಿ ಕಾರ್ಯಕ್ರಮವು ನಡೆಯಿತು. ಆರಂಭದಲ್ಲಿ ಶಂಕರಾಚಾರ್ಯರ ‘ಶ್ರೀ ದೇವಿ ಕ್ಷಮಾಪಣಾ ಸ್ತೋತ್ರ ಹಾಗೂ ಲಕ್ಷ್ಮೀನೃಸಿಂಹ ಸ್ತೋತ್ರಗಳನ್ನು ನವ್ಯಾರವರ ನೇತೃತ್ವದಲ್ಲಿ ಅಕಾಡಮಿಯ ವಿದ್ಯಾರ್ಥಿಗಳು ಹಾಡಿದರು. ಮಾಧವೀಯ ‘ಶಂಕರ ವಿಜಯ’ ದಿಂದ ಆಯ್ದ ‘ಪರಕಾಯ ಪ್ರವೇಶ’ದ ಪ್ರಸಂಗದ ಪದ್ಯಗಳನ್ನು ಹಿರಿಯ ಗಮಕಿ ಕರ್ನಾಟಕ ಕಲಾಶ್ರೀ ಜಿ ಎನ್ ನಾರಾಯಣ್ ರವರು ಹಾಡಿದರು. ಶಂಕರರ ಚೈತನ್ಯ ಅವರದೇ ಶರೀರವನ್ನು ಪ್ರವೇಶಿಸಲು ಬಂದಾಗ ರಾಜನ ಸೇವಕರು ಉರಿಹಾಕಿಬಿಟ್ಟಿದ್ದರು. ಅದನ್ನು ಶಮನಗೊಳಿಸಲು ಲಕ್ಷ್ಮೀನೃಸಿಂಹ ಸ್ತೋತ್ರ ಹಾಡಿ ಪಡೆದ ಗೆಲುವಿನ ಕಥಾನಕ ಅವರ ಶಕ್ತಿಯನ್ನು ರೂಪಿಸಿತು.ಅಂಕಣಕಾರ ಶ್ರೀಕಂಠ ಬಾಳಗಂಚಿಯವರು ಶಂಕರಾಚಾರ್ಯರ ನಾಲ್ಕು ಪ್ರಮುಖ ಶಿಷ್ಯರ ಪೂರ್ವೋತ್ತರಗಳನ್ನು ತಿಳಿಸುತ್ತಾ ಶಂಕರರು ಭಾರತದ ನಾಲ್ಕೂ ದಿಸೆಯಲ್ಲಿ ಸ್ಥಾಪಿಸಿರುವ ಮಠಗಳು ಹಾಗೂ ಅವರ ಮುಖ್ಯ ಶಿಷ್ಯರು ಅವುಗಳ ನೇತೃತ್ವವನ್ನು ವಹಿಸಿಕೊಂಡ ಹಿನ್ನೆಲೆಗಳನ್ನು ವಿವರವಾಗಿ ತಿಳಿಸಿದರು. ಪ್ರತಿಯೊಬ್ಬ ಶಿಷ್ಯನೂ ಗುರುವಿಗೆ ದೊರೆತ ಪರಿ-ಅವರ ಪರೀಕ್ಷೆ ಹಾಗೂ ನಡೆದ ಪವಾಡಸದೃಶ ಘಟನೆಗಳು ಕುತೂಹಲ ಮೂಡಿಸಿತು. ವೇದಗಳ ಆಧಾರದಲ್ಲಿ ಮಠಗಳನ್ನು ಕಟ್ಟಿ ಅಲ್ಲಿಯ ಪರಂಪರೆಯನ್ನು ಬೆಳೆಸಲು ಹಾದಿ ಹಾಕಿಕೊಟ್ಟ ಶಂಕರರು ಭಾರತದ ಬುನಾದಿಯನ್ನು ಬಲಪಡಿಸಿರುವುದು 1300 ವರ್ಷಗಳ ಇತಿಹಾಸ.ಆರಂಭದಲ್ಲಿ ಇತ್ತೀಚೆಗೆ ಕಾಲವಶರಾದ ಜೇನ್ದನಿಯ ಗಾಯಕಿ ಎಸ್ ಜಾನಕಿ ಹಾಗೂ ಮ್ಯಾಂಡೊಲಿನ್ ಮಾಂತ್ರಿಕ ಎನ್ ಎಸ್ ಪ್ರಸಾದ್ ರವರಿಗೆ ಮೌನನಮನ ಸಲ್ಲಿಸಲಾಯಿತು. ಕವಿ ಭ ರಾ ವಿಜಯಕುಮಾರರು ಜಾನಕಿಯವರ ಕುರಿತು ಮಾತನಾಡಿ, ಗಂಧರ್ವವಿದ್ಯೆಯಾದ ಸಂಗೀತದ ಗಂಧರ್ವಕನ್ಯೆಯಾಗಿ ಮೆರೆದ ಅವರ ಜೀವನವನ್ನೂ ಗಾನಕೌಶಲವನ್ನೂ ನೆನೆದು ಹಾಡುಗಳಿರುವವರೆಗೆ ಅವರ ನೆನಪು ಶಾಶ್ವತ ಎಂದರು. ಉಪಾಧ್ಯಕ್ಷರಾದ ಹಾಗೂ ಲಯವಾದ್ಯಗಾರರೂ ಆದ ರವಿ(ಶಾಮದತ್ತ) ಅವರು ಗೆಳೆಯ ಮ್ಯಾಂಡೊಲಿನ್ ಪ್ರಸಾದರ ಒಡನಾಟದ ನೆನಪುಗಳನ್ನು ಹಂಚಿಕೊAಡರು. ಗಾಯತ್ರಿ ಕೇಶವರವರು ಜಾನಕಿಯವರ ಭಕ್ತಿಗೀತೆಯೊಂದನ್ನು ಹಾಡಿದರು.
ಅಕಾಡಮಿಯ ಬಾಲವಿದ್ಯಾರ್ಥಿಗಳು ಶಾರದೆಯ ಹಾಡನ್ನು ಹಾಡಿ ರಂಜಿಸಿದರು. ಹಿರಿಯ ವಿದ್ಯಾರ್ಥಿಗಳು ಗುರುವನ್ನು ಕುರಿತಾದ ಹಾಡನ್ನು ವೃಂದಗಾನದಲ್ಲಿ ಪ್ರಸ್ತುತಪಡಿಸಿದರು. ಅಧ್ಯಕ್ಷರಾದ ಚಂದ್ರಶೇಖರರು ಅಕಾಡಮಿಯ ಈ ಸರಣಿ ಸರಿಯಾದ ಹಾದಿಯಲ್ಲಿ ಸಾಗುತ್ತಾ ಪ್ರಸ್ತುತವಾಗಿ ಸಮಾಜವನ್ನು ತಲುಪಿರುವುದಕ್ಕೆ ಸಂತಸಪಟ್ಟರು. ಕಾರ್ಯಕ್ರಮ ನಿರ್ವಹಣೆ ಮಾಡಿದ ಕವಿ ಭ.ರಾ.ವಿಜಯಕುಮಾರರು ಸಾಂದರ್ಭಿಕವಾಗಿ ಕೆಲವು ಪ್ರಸಂಗಗಳನ್ನೂ ಕುತೂಹಲ ಮಾಹಿತಿಗಳನ್ನೂ ನೀಡುತ್ತಾ ಆಸಕ್ತಿಯನ್ನು ಕಾಪಿಟ್ಟರು. ಆರತಿಯೊಂದಿಗೆ ಆಚಾರ್ಯರಿಗೆ ಮಂಗಳವನ್ನು ಹಾಡಲಾಯಿತು. ಶಾಮದತ್ತ(ರವಿ)ಯವರು ಸ್ವಾಗತ ಮಾಡಿದ ಈ ಕಾರ್ಯಕ್ರಮವು ಕಾರ್ಯದರ್ಶಿ ಕೇಶವಮೂರ್ತಿಯವರ ವಂದನಾ ರ್ಪಣೆಯೊಂದಿಗೆ ಸಂಪನ್ನವಾಯಿತು.
`ಮಠ ಸ್ಥಾಪನೆ-ಶಿಷ್ಯಪರಂಪರೆ ಶಂಕರರ ಕೊಡುಗೆ’



