ರಾಜಕೀಯ ಅಂದ್ರೆ ಕೇವಲ ಅಧಿಕಾರದ ಆಟ ಅಂತ ನಾವು ಹಲವಾರು ಬಾರಿ ಕೇಳಿದ್ದೀವಿ. ಆದರೆ ಕೆಲವೊಮ್ಮೆ ಆ ರಾಜಕೀಯದ ವೇದಿಕೆಯ ಮೇಲೂ ಮನುಷ್ಯತ್ವದ ನಿಜ ಮುಖ ಕಾಣ್ಸುತ್ತೆ.ಅಂತಹ ಒಂದು ಅಪರೂಪದ ಕ್ಷಣಕ್ಕೆ ನಾನು ಸಾಕ್ಷಿಯಾದೆ.ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಕುರಿತಾಗಿ ಕರೆಯಿಸಿದ್ದ ಪತ್ರಿಕಾಗೋಷ್ಠಿ ಸಾಮಾನ್ಯ ಪ್ರೆಸ್ ಮೀಟ್ ಆಗಿರಲಿಲ್ಲ. ಅದು ಒಬ್ಬ ನಾಯಕನ ಹೃದಯದ ಮಾತುಗಳ ಮೌನ ಮಳೆ ಆಗಿತ್ತು.ನನ್ನ 38 ವರ್ಷದ ಮಾಧ್ಯಮ ಬದುಕಿನಲ್ಲಿ ಅನೇಕ ರಾಜಕಾರಣಿಗಳ ಏರುಪೇರು, ಅಧಿಕಾರದ ಹೋರಾಟ, ಕಣ್ಣೀರು, ನಗು – ಎಲ್ಲವನ್ನೂ ನೋಡಿದ್ದೇನೆ. ಆದರೆ ಈ ದಿನದ ವಾತಾವರಣ ಮಾತ್ರ ವಿಭಿನ್ನವಾಗಿತ್ತು.
ಮಾತಿನಲ್ಲೇ ಒಂದು ನೋವು ಇತ್ತು?ಮುಖದಲ್ಲಿ ದಣಿವು ಇತ್ತು?ಆದರೂ ಮನಸ್ಸಿನೊಳಗಿನ ಸ್ಥೈಯ ಮಾತ್ರ ಅಲುಗಾಡಿರಲಿಲ್ಲ. ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾಗ, ಅದು ಕೇವಲ ಒಬ್ಬ ಮುಖ್ಯಮಂತ್ರಿ ಮಾತನಾಡುತ್ತಿರುವಂತೆ ಕಾಣಲಿಲ್ಲ.ರಾಜ್ಯದ ಭವಿಷ್ಯದ ಬಗ್ಗೆ ಕಳಕಳಿ ಹೊಂದಿರುವ ಒಬ್ಬ ಹಿರಿಯ ರಾಜಕಾರಣಿ ತನ್ನ ಒಳಮನದ ಮಾತುಗಳನ್ನು ಹಂಚಿಕೊಳ್ಳುತ್ತಿರುವಂತೆ ಅನಿಸಿತು.ಅವರ ಭಾಷಣದಲ್ಲಿ ಯಾವುದೇ ಅತಿರೇಕ ಇರಲಿಲ್ಲ. ಯಾರ ಮೇಲೂ ದ್ವೇಷದ ಮಾತಿರಲಿಲ್ಲ. ರಾಜಕೀಯ ಆರೋಪಗಳ ಗದ್ದಲ ಇರಲಿಲ್ಲ.ಬದಲಿಗೆ – ಒಂದು ಪ್ರೌಢತೆ, ಒಂದು ರಾಜಕೀಯ ಸಂಸ್ಕೃತಿ ಮತ್ತು ಅನುಭವದ ಆಳ ಇತ್ತು. ವಿಶೇಷವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅವರು ನೀಡಿದ ಅಂಕಿಅAಶಗಳು ಅಚ್ಚರಿ ಮೂಡಿಸಿದವು. ಎಷ್ಟೋ ಸಂಖ್ಯೆಗಳು, ಯೋಜನೆಗಳು, ಹಣಕಾಸಿನ ವಿವರಗಳು – ಎಲ್ಲವೂ ಅವರ ನೆನಪಿನಲ್ಲೇ ಜೀವಂತವಾಗಿದ್ದವು.ಒಬ್ಬ ನಾಯಕನಿಗೆ ಆಡಳಿತದ ಮೇಲೆ ಎಷ್ಟು ಹಿಡಿತ ಇರಬಹುದು ಅನ್ನೋದಕ್ಕೆ ಅದು ಜೀವಂತ ಸಾಕ್ಷಿ.ಕೆಲ ಕ್ಷಣಗಳಲ್ಲಿ ಅವರ ಧ್ವನಿ ತುಸು ನಡುಗಿದಂತಾಯಿತು.ಆ ಕ್ಷಣದಲ್ಲಿ ಪತ್ರಕರ್ತರಾಗಿ ಕುಳಿತಿದ್ದ ನನ್ನೊಳಗೂ ಒಂದು ಭಾವನೆ ಎದ್ದಿತು.`ಅಧಿಕಾರ ಶಾಶ್ವತ ಅಲ್ಲ… ಆದರೆ ಸೇವೆಯ ಸತ್ಯ ಶಾಶ್ವತ.’
ರಾಜಕೀಯದಲ್ಲಿ ವಿದಾಯಗಳು ಹೊಸದಲ್ಲ. ಆದರೆ ಕೆಲವು ವಿದಾಯಗಳು ಮನಸ್ಸಿನ ಗೋಡೆಯ ಮೇಲೆ ಗುರುತು ಬಿಡುತ್ತವೆ.ಆ ದಿನದ ಪತ್ರಿಕಾಗೋಷ್ಠಿ ಅಂತಹ ಒಂದು ನೆನಪು.ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳ್ಬೇಕಂದ್ರೆ –
`ಅವರು ಮಾತಾಡ್ತಿರೋ’ಗ ಅಲ್ಲಿ ರಾಜಕೀಯ ಕಡಿಮೆ, ಮನಸ್ಸಿನ ಮಾತು ಜಾಸ್ತಿ ಇತ್ತು. ಕುರ್ಚಿ ಹೋಗ್ಬೋದು, ಅಧಿಕಾರ ಹೋಗ್ಬೋದು… ಆದ್ರೂ ಜನರ ಪ್ರೀತಿ ಉಳಿದ್ರೆ ನಾಯಕ ಸೋಲೋದಿಲ್ಲ ಅನ್ನೋ ಮಾತು ಈ ದಿನ ನಿಜ ಅನಿಸ್ತು.’ಸಮಯ ಯಾರನ್ನೂ ಶಾಶ್ವತವಾಗಿ ಒಂದೇ ಸ್ಥಾನದಲ್ಲಿ ಇರೋದಿಲ್ಲ. ಆದರೆ ಕೆಲವು ನಾಯಕರು ತಮ್ಮ ಮಾತು, ನಡತೆ ಮತ್ತು ಪ್ರೌಢತೆಯಿಂದ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ.ಈ ದಿನ ಸಿದ್ದರಾಮಯ್ಯ ಅವರ ಪತ್ರಿಕಾಗೋಷ್ಠಿ ನೋಡಿದ ಮೇಲೆ… ನನಗೆ ಅವರು ಕೇವಲ ಮುಖ್ಯಮಂತ್ರಿ ಅಲ್ಲ, ರಾಜಕೀಯ ಜೀವನದ ಒಂದು ಪಾಠವಾಗಿ ಕಾಣಿಸಿದರು.ಅದು ಒಬ್ಬ ನಾಯಕನ ವಿದಾಯ ಮಾತ್ರವಲ್ಲ..ಒಂದು ಯುಗದ ಮೌನ ಸಂಭಾಷಣೆ ಆಗಿತ್ತು.
– ನಿರ್ಮಲ ಸಿ ಯಲಿಗಾರ್
ಒಬ್ಬ ಮುಖ್ಯಮಂತ್ರಿಯ ಮೌನದ ವಿದಾಯ



