ಲೇಖಕರು -ವಿವಾನ್ ಅಕ್ಷಯ್
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ
ಭಾರತವು ಸ್ವಾತಂತ್ರ÷್ಯ ಪಡೆದ ನಂತರ ಎದುರಿಸಿದ ಅತ್ಯಂತ ಗಂಭೀರ ಸವಾಲುಗಳಲ್ಲಿ ಪ್ರಮುಖವಾದದ್ದು ಒಂದು ಸಮಗ್ರ ಸಂವಿಧಾನವನ್ನು ರೂಪಿಸುವುದಾಗಿತ್ತು. ರಾಜಕೀಯವಾಗಿ ಸ್ವತಂತ್ರವಾದ ದೇಶವು ಸಾಮಾಜಿಕವಾಗಿ ವಿಭಜಿತವಾಗಿದ್ದ ಸಂದರ್ಭದಲ್ಲಿ, ಒಂದು ನ್ಯಾಯಯುತ ಹಾಗೂ ದೀರ್ಘಕಾಲಿಕ ವ್ಯವಸ್ಥೆಯನ್ನು ನಿರ್ಮಿಸುವ ಅಗತ್ಯತೆ ಎದುರಾಯಿತು. ಈ ಇತಿಹಾಸಘಟ್ಟದಲ್ಲಿ ನಿರ್ಣಾಯಕ ಪಾತ್ರವಹಿಸಿದವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಕಾನೂನುಪರಿಣತಿ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ದೂರದೃಷ್ಟಿಯು ಸಂವಿಧಾನವನ್ನು ಕೇವಲ ಆಡಳಿತದ ನಿಯಮಗಳ ಸಂಕಲನವಾಗಿಯೇ ಉಳಿಸದೆ, ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ದಾಖಲೆಯಾಗಿ ರೂಪುಗೊಳ್ಳುವಂತೆ ಮಾಡಿತು. ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಆ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸುವುದು ಮುಖ್ಯ. ಭಾರತವು ಭಾಷಾ, ಸಂಸ್ಕೃತಿ, ಧರ್ಮ ಮತ್ತು ಜಾತಿ ವೈವಿಧ್ಯತೆಯೊಂದಿಗೆ ಕೂಡಿದ ರಾಷ್ಟ್ರವಾಗಿತ್ತು. ಈ ವೈವಿಧ್ಯತೆ ರಾಷ್ಟ್ರದ ಶಕ್ತಿಯಾಗಬಹುದಾಗಿದ್ದರೂ, ಅದು ವಿಭಜನೆಯ ಕಾರಣವಾಗುವ ಸಾಧ್ಯತೆಯೂ ಇತ್ತು. ಈ ಸವಾಲಿನ ನಡುವೆ ಸಂವಿಧಾನವು ಎಲ್ಲರನ್ನು ಒಂದೇ ರಾಷ್ಟ್ರೀಯ ಚೌಕಟ್ಟಿನಲ್ಲಿ ಸೇರಿಸುವ ಸಾಧನವಾಗಬೇಕೆಂಬ ಅಗತ್ಯತೆ ಎದುರಾಯಿತು.
ಈ ಹಿನ್ನೆಲೆಯಲ್ಲೇ ಡಾ ಅಂಬೇಡ್ಕರ್ ಅವರು `ರಾಜಕೀಯ ಪ್ರಜಾಪ್ರಭುತ್ವ’ ಮಾತ್ರ ಸಾಕಾಗುವುದಿಲ್ಲ ಎಂಬ ದೃಷ್ಟಿಕೋನವನ್ನು ಮುಂದಿಟ್ಟರು. ಮತದಾನದ ಹಕ್ಕು ನೀಡುವುದರಿಂದ ಮಾತ್ರ ಸಮಾನತೆ ಸ್ಥಾಪಿಸಲಾಗುವುದಿಲ್ಲ ಸಮಾಜದಲ್ಲಿ ಗೌರವ ಮತ್ತು ಅವಕಾಶಗಳ ಸಮಾನ ಹಂಚಿಕೆ ಅಗತ್ಯವೆಂದು ಅವರು ಹೇಳಿದರು. ಅವರ ದೃಷ್ಟಿಯಲ್ಲಿ ಸಂವಿಧಾನವು ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕಿತ್ತು. ಇದೇ ಕಾರಣದಿಂದ ಅವರು ಮೂಲಭೂತ ಹಕ್ಕುಗಳ ಜೊತೆಗೆ ಮಾರ್ಗಸೂಚಿ ತತ್ವಗಳನ್ನು ಸೇರಿಸುವ ಮೂಲಕ ರಾಜ್ಯದ ಸಾಮಾಜಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು.
ಅಪರೂಪವಾಗಿ ಚರ್ಚೆಯಾಗುವ ಒಂದು ಮಹತ್ವದ ಅಂಶವೆಂದರೆ ಡಾ ಅಂಬೇಡ್ಕರ್ ಅವರು `ಸಂವಿಧಾನಿಕ ನೈತಿಕತೆ’ ಎಂಬ ತತ್ವವನ್ನು ಪ್ರಸ್ತಾಪಿಸಿದದ್ದು. ಅವರ ಪ್ರಕಾರ ಕಾನೂನುಗಳು ಎಷ್ಟೇ ಉತ್ತಮವಾಗಿದ್ದರೂ, ಅವುಗಳನ್ನು ಪಾಲಿಸುವ ಮನೋಭಾವ ಇಲ್ಲದಿದ್ದರೆ ಪ್ರಜಾಪ್ರಭುತ್ವ ಬಲವಾಗುವುದಿಲ್ಲ. ಈ ನೈತಿಕತೆ ನಾಗರಿಕರಲ್ಲಿ ಮತ್ತು ನಾಯಕರಲ್ಲಿ ಬೆಳೆಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
ಸಂವಿಧಾನದಲ್ಲಿ ಬಲಿಷ್ಠ ಕೇಂದ್ರದ ವ್ಯವಸ್ಥೆಯನ್ನು ರೂಪಿಸುವಲ್ಲಿ ಅವರ ದೃಷ್ಟಿ ವಿಶೇಷವಾಗಿತ್ತು. ಸ್ವಾತಂತ್ರ÷್ಯದ ನಂತರ ದೇಶದ ಏಕತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದ ಸಂದರ್ಭದಲ್ಲಿ, ಪ್ರಾದೇಶಿಕ ಶಕ್ತಿಗಳ ಅತಿಯಾದ ಪ್ರಾಬಲ್ಯ ರಾಷ್ಟ್ರದ ಸ್ಥಿರತೆಗೆ ಅಪಾಯಕಾರಿಯಾಗಬಹುದು ಎಂದು ಅವರು ನಂಬಿದರು. ಈ ಕಾರಣದಿಂದ ಕೇಂದ್ರ ಸರ್ಕಾರಕ್ಕೆ ಸಮರ್ಪಕ ಅಧಿಕಾರಗಳನ್ನು ನೀಡುವ ವ್ಯವಸ್ಥೆಯನ್ನು ರೂಪಿಸಿದರು. ಇದು ದೇಶದ ಏಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಡಾ ಅಂಬೇಡ್ಕರ್ ಅವರ ಕಾನೂನುಪರಿಣತಿಯ ಮತ್ತೊಂದು ಅಪರೂಪದ ಉದಾಹರಣೆ ಸಂವಿಧಾನವನ್ನು `ಚಲನೆಯುತ ದಸ್ತಾವೇಜು’ವಾಗಿಸುವ ಪ್ರಯತ್ನವಾಗಿದೆ. ಕಾಲದ ಅಗತ್ಯಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶ ನೀಡುವ ಮೂಲಕ ಅವರು ಭವಿಷ್ಯದ ಪೀಳಿಗೆಗಳಿಗೆ ಬದಲಾವಣೆಗಳನ್ನು ಸ್ವೀಕರಿಸುವ ಅವಕಾಶವನ್ನು ಒದಗಿಸಿದರು. ಈ ಕ್ರಮವು ಸಂವಿಧಾನವನ್ನು ಸ್ಥಿರವಾದರೂ ಪ್ರಗತಿಶೀಲವಾಗಿಯೂ ಉಳಿಸಿತು.
ಸಂವಿಧಾನ ಸಭೆಯ ಚರ್ಚೆಗಳಲ್ಲಿ ಡಾ ಅಂಬೇಡ್ಕರ್ ಅವರು ತೋರಿದ ತಾಳ್ಮೆ ಮತ್ತು ವಾದಪಟುತ್ವ ವಿಶಿಷ್ಟವಾಗಿತ್ತು. ವಿಭಿನ್ನ ಚಿಂತನೆಗಳ ನಾಯಕರ ಅಭಿಪ್ರಾಯಗಳನ್ನು ಗಮನಿಸಿ, ಅವುಗಳ ನಡುವಿನ ಸಮತೋಲನ ಸಾಧಿಸುವ ಮೂಲಕ ಅವರು ಸಂವಿಧಾನವನ್ನು ಎಲ್ಲರಿಗೂ ಸ್ವೀಕಾರಾರ್ಹವಾಗುವಂತೆ ರೂಪಿಸಿದರು. ಇದು ಅವರ ನಾಯಕತ್ವದ ಅತ್ಯುತ್ತಮ ಉದಾಹರಣೆಯಾಗಿದೆ.
ಅಪರೂಪವಾಗಿ ಉಲ್ಲೇಖವಾಗುವ ಮತ್ತೊಂದು ಅಂಶವೆAದರೆ ಅವರು `ವೀರಪೂಜೆ’ ಕುರಿತು ನೀಡಿದ ಎಚ್ಚರಿಕೆ. ಯಾವುದೇ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳ ಮೇಲಿನ ಅತಿಯಾದ ಭಕ್ತಿ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು. ಕಾನೂನು ಮತ್ತು ಸಂಸ್ಥೆಗಳ ಮೇಲಿನ ನಂಬಿಕೆಯೇ ರಾಷ್ಟ್ರದ ಸ್ಥಿರತೆಗೆ ಮೂಲವೆಂದು ಅವರು ನಂಬಿದರು. ಈ ಎಚ್ಚರಿಕೆ ಇಂದಿನ ಕಾಲದಲ್ಲಿಯೂ ಪ್ರಸ್ತುತವಾಗಿದೆ. ಡಾ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ನೀಡಿದ ಮಹತ್ವವು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದೆ. ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ಒದಗಿಸುವ ವ್ಯವಸ್ಥೆ ಕೇವಲ ಒಂದು ರಾಜಕೀಯ ಕ್ರಮವಲ್ಲ; ಅದು ಸಮಾಜದಲ್ಲಿ ದೀರ್ಘಕಾಲಿಕ ಸಮಾನತೆಯನ್ನು ಸಾಧಿಸುವ ಮಾರ್ಗವಾಗಿತ್ತು. ಈ ದೃಷ್ಟಿಯಲ್ಲಿ ಅವರ ಚಿಂತನೆ ರಾಷ್ಟ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡಿತ್ತು. ಅವರ ಆರ್ಥಿಕ ದೃಷ್ಟಿಯು ಸಹ ಸಂವಿಧಾನದಲ್ಲಿ ಪ್ರತಿಫಲಿತವಾಗಿದೆ. ರಾಜಕೀಯ ಸ್ವಾತಂತ್ರ್ಯವು ಆರ್ಥಿಕ ಸಮಾನತೆಯಿಲ್ಲದೆ ಅಪೂರ್ಣವೆಂದು ಅವರು ಹೇಳಿದರು. ಈ ಕಾರಣದಿಂದ ರಾಜ್ಯವು ನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂಬ ತತ್ವವನ್ನು ಮಾರ್ಗಸೂಚಿ ತತ್ವಗಳಲ್ಲಿ ಸೇರಿಸಲಾಯಿತು.
ಸಂವಿಧಾನದ ಮೂಲಕ ಅಂಬೇಡ್ಕರ್ ಅವರು `ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ’ ಎಂಬ ಮೌಲ್ಯಗಳನ್ನು ಭಾರತೀಯ ಸಮಾಜದಲ್ಲಿ ನೆಲೆಗೊಳಿಸಲು ಪ್ರಯತ್ನಿಸಿದರು. ಈ ಮೌಲ್ಯಗಳು ಕೇವಲ ಘೋಷಣೆಗಳಲ್ಲ; ಅವು ಸಮಾಜದ ನೈಜ ಜೀವನದಲ್ಲಿ ಅಳವಡಿಸಬೇಕಾದ ತತ್ವಗಳಾಗಿವೆ ಎಂದು ಅವರು ಹೇಳಿದರು. ಈ ದೃಷ್ಟಿಯಲ್ಲಿ ಸಂವಿಧಾನವು ಕೇವಲ ಆಡಳಿತದ ಚೌಕಟ್ಟಲ್ಲ; ಅದು ಸಮಾಜದ ನೈತಿಕ ಮಾರ್ಗದರ್ಶಕವಾಗಿದೆ. ಇಂದಿನ ಕಾಲದಲ್ಲಿ ಭಾರತವು ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಮಹತ್ವ ಮತ್ತಷ್ಟು ಸ್ಪಷ್ಟವಾಗುತ್ತದೆ. ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಏಕತೆಯನ್ನು ಕಾಪಾಡುವಲ್ಲಿ ಅದು ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯು ಇಂದಿಗೂ ಪ್ರಸ್ತುತವಾಗಿದೆ.
ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ಆಳವಾಗಿ ವಿಶ್ಲೇಷಿಸಿದಾಗ ಅದು ಕೇವಲ ಕಾನೂನುಪರಿಣತಿಯ ಫಲವಲ್ಲ ಅದು ಒಂದು ಸಾಮಾಜಿಕ ಮತ್ತು ನೈತಿಕ ಕ್ರಾಂತಿಯ ಪ್ರಾರಂಭವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇದೇ ಕಾರಣದಿಂದ ಸಂವಿಧಾನವು ಭಾರತದ ರಾಷ್ಟ್ರಚಿಂತನೆಯ ಇತಿಹಾಸದಲ್ಲಿ ಒಂದು ದೀಪಸ್ತಂಭದAತೆ ನಿಂತಿದೆ.
ಸಂವಿಧಾನ ರಚನೆ: ಶಕ್ತಿ, ದೃಷ್ಟಿ ಮತ್ತು ಕಾನೂನು ಪರಿಣತಿ-ಡಾ. ಬಿ.ಆರ್.ಅಂಬೇಡ್ಕರ್; ರಾಷ್ಟ್ರತೆಯ ಚಿಂತನೆಗಳು ಭಾಗ-11



