ನೆಲಮಂಗಲ: ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಸಿಐಎಸ್ಎಫ್ನ ಡೆಪ್ಯೂಟಿ ಕಮಾಂಡೆಂಟ್ ಉಮಾ ಮಹೇಶ್ವರನ್ ಹೇಳಿದರು.
ತಾಲ್ಲೂಕಿನ ದಾಬಸ್ಪೇಟೆಯ ವಿ.ಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಇನ್ವೆಸ್ಟಿಚರ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಅಮೂಲ್ಯ ಹಂತವಾಗಿದ್ದು, ಈ ಅವಧಿಯಲ್ಲಿ ಕಠಿಣ ಪರಿಶ್ರಮದೊಂದಿಗೆ ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಗುರು-ಹಿರಿಯರಲ್ಲಿ ಗೌರವದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ನಾಯಕತ್ವದ ಗುಣಗಳು ಬೆಳೆಯುವುದರ ಜೊತೆಗೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಶಾಲೆಯಲ್ಲಿ ನೀಡುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಶಾಲೆ, ಪೋಷಕರು ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಬಹುದು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ರಾಜಶೇಖರ್, ಪ್ರಾಂಶುಪಾಲೆ ಶಿಲ್ಪ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ



