ಬೆಂಗಳೂರು: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಯೋಜನೆ ಹಮ್ಮಿಕೊಂಡಿದ್ದಾರೆ. ಹಾಗೆಂದು ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗುವುದು ಸಹಜ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ,ನಾವು ಸುಮ್ಮನೇ, ಬಿಜೆಪಿ ಕಾಲದಲ್ಲಿಯೂ ರಸ್ತೆ ಗುಂಡಿಗಳು ಆಗಿರಲಿಲ್ಲವಾ ಎಂದರೆ ಏನೋ ಸುಮ್ಮನೆ ಹೇಳಿಕೆ ಕೊಟ್ಟಂತಾಗುತ್ತದೆ. ಎಲ್ಲರ ಆಡಳಿತ ಕಾಲದಲ್ಲಿಯೂ ರಸ್ತೆಯಲ್ಲಿ ಗುಂಡಿಗಳಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಗುಂಡಿಗಳು, ಪ್ರವಾಹ, ನೆರೆಯಂಥ ಪರಿಸ್ಥಿತಿಗಳು ಸಾಮಾನ್ಯ. ನಮ್ಮಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲ. ಅನೇಕ ಸಮಸ್ಯೆಗಳು ಇರುತ್ತವೆ. ಅವುಗಳನ್ನೆಲ್ಲ ಸರಿಪಡಿಸಬೇಕು. ಇವೆಲ್ಲ ದೊಡ್ಡ ಕೆಲಸ ಕಾರ್ಯಗಳು. ಆದರೆ ಈ ಬಗ್ಗೆ ಅವಹೇಳನ ಸಲ್ಲ ಎಂದು ಅವರು ಹೇಳಿದರು.ನಮ್ಮವರೇ ಬೆಂಗಳೂರನ್ನು ಅವಹೇಳನ ಮಾಡಬಾರದು.
ಬ್ರ್ಯಾಂಡ್ ಬೆಂಗಳೂರು ಅಲ್ಲ, ಗುಂಡಿ ಬೆಂಗಳೂರು ಎಂದೆಲ್ಲ ಅವಹೇಳನ ಮಾಡುವುದು ಸರಿಯಲ್ಲ. ಈ ರೀತಿ ಮಾಡುವ ಮೂಲಕ ಹೊರ ದೇಶದವರಿಗೆ, ಹೊರಗಿನವರಿಗೆ ಏನು ಸಂದೇಶ ನೀಡುತ್ತೀರಿ? ನಮ್ಮ ವಿರುದ್ಧ ಟೀಕೆ ಮಾಡಿ. ಆದರೆ, ಹೊರಗಿನವರಿಗೆ ತಪ್ಪು ಸಂದೇಶ ಕೊಡಬಾರದು. ಸ್ವಲ್ಪವಾದರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.