ದೊಡ್ಡಬಳ್ಳಾಪುರ: ಮಧ್ಯಪ್ರಾಚ್ಯದ ಸಂದಿಗ್ಧತೆಯನ್ನೇ ನೆಪ ಮಾಡಿಕೊಂಡು ಅವೈಜ್ಞಾನಿಕವಾಗಿ ತೈಲೋತ್ಪನ್ನಗಳು ಹಾಗೂ ಅಡುಗೆ ಅನಿಲ ದರವನ್ನು ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಯನ್ನು ಅನುಸರಿಸುತ್ತಿದೆ. ಕೂಡಲೇ ಬೆಲೆ ಏರಿಕೆ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಇಲ್ಲಿನ ಕನ್ನಡ ಪಕ್ಷದ ನೇತೃತ್ವದಲ್ಲಿ ಮಂಗಳವಾರ ತಾಲೂಕು ಕಚೇರಿಗೆಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.ಇದಕ್ಕೂ ಮುನ್ನ ಖಾಲಿ ಸಿಲಿಂಡರ್ ಹೊತ್ತು ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ಕೇಂದ್ರದ ಅವೈಜ್ಞಾನಿಕ ನೀತಿ ಗಳನ್ನು ಖಂಡಿಸಿದರು.ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು, ಸರ್ಕಾರಿ ಸ್ವಾಮ್ಯದ ಮಾರಾಟ ಕಂಪನಿಗಳು ಕಳೆದ ತಿಂಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿವೆ. ಕೇವಲ 11 ದಿನಗಳ ಅಂತರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವು ಸರಿ ಸುಮಾರು ಶೇ.7.5 ರಷ್ಟು ಏರಿಕೆಯಾಗಿದ್ದು ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಂ ತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಮೇ ತಿಂಗಳಲ್ಲಿ ಶೇ.20ರಷ್ಟು ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಇಳಿಕೆಯ ಲಾಭವನ್ನು ದೇಶದ ಜನರಿಗೆ ತಲುಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇಕಡ 5 ರಷ್ಟು ಏರಿಕೆಯಾದರೆ ತೈಲೋತ್ಪನ್ನಗಳ ಕಂಪನಿಗಳು ನಷ್ಟಕ್ಕೆ ಸಿಲುಕಲಿವೆ ಎಂದು ರಾತ್ರೋ ರಾತ್ರಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲೋತ್ಪನ್ನಗಳ ಬೆಲೆ ಶೇಕಡ 20ರಷ್ಟು ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದಿರುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶವಾಸಿಗಳ ಮೇಲಿರುವ ಅಪಾರವಾದ ಪ್ರೀತಿಯ ಸಂಕೇತ ಎಂದು ಲೇವಡಿ ಮಾಡಿದರು.ಈಗಾಗಲೇ ವಾಣಿಜ್ಯ ಗ್ಯಾಸ್ ಸಿಲೆಂಡರ್ ಬೆಲೆ ಒಂದು ಸಿಲಿಂಡರ್ಗೆ ಸರಿಸುಮಾರು 1 ಸಾವಿರ ರುಪಾಯಿಗಳಷ್ಟು ಹೆಚ್ಚಳವಾಗಿದ್ದು ಇದರ ನೇರ ಪರಿಣಾಮ ಗ್ರಾಹಕರ ಮೇಲಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕೆ ದರ ಹೆಚ್ಚಳವಾಗಿದ್ದು ಅದರ ಪರಿಣಾಮ ದಿನನಿತ್ಯ ಬಳಸುವಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಎನ್ನುವಂತಾಗಿದೆ. ಕೇಂದ್ರ ಸರ್ಕಾರ ಪದೇ ಪದೇ ಬೆಲೆ ಏರಿಕೆ ಮಾಡು ತ್ತಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ರೈತರು, ನೇಕಾರರು, ಶ್ರಮಿಕರು ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಏರಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿದರು.ತಾಲೂಕು ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಮುಖಂಡರಾದ ಸಂಜೀವನಾಯಕ್, ಡಿ.ಪಿ.ಆಂಜನೇಯ, ಜಿಲ್ಲಾ ಮುಖಂಡ ರಾದ ಮುನಿಪಾಪಯ್ಯ, ಅಧ್ಯಕ್ಷ ವೆಂಕಟೇಶ್ ಸೇರಿದಂತೆ ವಿವಿಧ ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.



