ನಟ ದರ್ಶನ್ ಗೆ ದಾಸ ಎಂಬ ಹೆಸರು ಬಂದಿದ್ದೇ ಮೆಜೆಸ್ಟಿಕ್ ಚಿತ್ರದಿಂದ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ಗೆ ಒಳ್ಳೇ ಹೆಸರನ್ನೂ ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ ಮೆಜೆಸ್ಟಿಕ್ 2 ಹೆಸರಲ್ಲಿ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಆ ಚಿತ್ರ ಸೆಟ್ಟೇರಲು ಸಿದ್ದವಾಗಿದೆ.
ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಕಳೆದ ಸೋಮವಾರ ಮೆಜೆಸ್ಟಿಕ್ -2 ಚಿತ್ರದ ಟೈಟಲ್ ಅನಾವರಣ ಸಮಾರಂಭ ನೆರವೇರಿತು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಸ್ನೇಹಿತರು ಹಾಜರಿದ್ದು ಶುಭ ಹಾರೈಸಿದರು. ಆರಂಭದಲ್ಲಿ ಮಾತನಾಡಿದ ನಿರ್ಮಾಪಕ ಆನಂದಪ್ಪ ನಾನು ಈ ಹಿಂದೆ ಪಿಂಕ್ ನೋಟ್ ಎಂಬ ಚಿತ್ರವನ್ನು ಆರಂಭಿಸಿದ್ದೆ, ಅದಾಗಲೇ 90ರಷ್ಟು ಮುಗಿದಿದೆ.
ಇದು ಎರಡನೇ ಚಿತ್ರ. ಸ್ನೇಹಿತ ರಾಮು ಬಹಳ ದಿನಗಳಿಂದ ಈ ಕಥೆ ಚೆನ್ನಾಗಿದೆ ನೋಡಿ ಅಂತ ಹೇಳ್ತಾ ಇದ್ದರು, ಒಮ್ಮೆ ಕಥೆ ಕೇಳಿದೆ, ಇಷ್ಟವಾಯ್ತು, ಜನ ನಮ್ಮ ಸಿನಿಮಾ ನೋಡಿ ಅದರಲ್ಲಿ ಏನಾದರೂ ಆಯ್ಕೆ ಮಾಡಿಕೊಳ್ಳಬೇಕು, ಅಂಥ ಸಿನಿಮಾ ಮಾಡಿ ಎಂದೆ, ನಾವೆಲ್ಲ ಸೇರಿ ಒಳ್ಳೇ ಚಿತ್ರ ಮಾಡುತ್ತಿದ್ದೇವೆ, ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.