ಕೊಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ನಂತರ ನಮ್ಮ ಮುಂದಿನ ಗುರಿ ದೆಹಲಿಯಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣಾನಂದ ನಗರದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ಈ ಬಾರಿ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಗೆಲ್ಲುವುದು ನಿಶ್ಚಿತ. ಇದಾದ ನಂತರ ನಮ್ಮ ಗುರಿ ದೆಹಲಿಯಲ್ಲಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯುವುದಾಗಿ ಬಿಜೆಪಿ ನಾಯಕರಿಗೆ ಅವರು ಸವಾಲು ಹಾಕಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಹರಿಹಾಯ್ದರು.
ಈಗಾಗಲೇ ಪಶ್ಚಿಮಬಂಗಾಳದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆ ಪ್ರಚಾರ ನಡೆಯುತ್ತಿದ್ದು, ಮೊದಲನೇ ಹಂತದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ದಾಖಲೆ ಪ್ರಮಾಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರೊಂದು ಕಡೆ ಚುನಾವಣಾ ಪ್ರಚಾರ ಕೈಗೊಂಡು ಈ ಬಾರಿ ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರ ಕೊನೆಗೊಳ್ಳಲಿದೆ. ಅವರ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಮಮತಾ ಅವರನ್ನು ಮನೆಗೆ ಕಳುಹಿಸಲು ಜನ ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ನೆಲದ ಮಣ್ಣಿನ ಮಗ ಸಿಎಂ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ಗುರಿ ದೆಹಲಿ ಬಿಜೆಪಿ ಕಿತ್ತೊಗೆಯುವುದಾಗಿ ಮಮತಾ ಬ್ಯಾನರ್ಜಿ ಸವಾಲ್.



