ಬೆಂಗಳೂರು: ನಿನ್ನೆ ರಾಜ್ಯಕ್ಕೆ ಪ್ರಧಾನಿ ಮಂತ್ರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಕಂಡುಬಂದಿದ್ದು, ಪ್ರಧಾನಿ ಸಾಗುವ ಹಾದಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎನ್ಐಎ ತನಿಖೆಗೆ ಮುಂದಾಗಿದೆ. ನಿನ್ನೆಯಿಡಿ ರಾಜ್ಯದ ಪೊಲೀಸ್ ಅಧಿಕಾರಿಗಳು ಜಿಲೆಟಿನ್ ಕಡ್ಡಿ ಪತ್ತೆಯಾದ ಬಗ್ಗೆ ತನಿಖೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ. ವಡೆಯರಹಳ್ಳಿ ಗೇಟ್ ಬಳಿ ಜಿಲೆಟಿನ್ ಕಡ್ಡಿ ಇಟ್ಟಿದ್ದ ಬಾಕ್ಸ್ ಪತ್ತೆಯಾಗಿದ್ದು, ಬಾಕ್ಸ್ನಲ್ಲಿ ಎರಡು ಬ್ಯಾಟರಿಗಳು ಮಾತ್ರ ದೊರೆತಿವೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನದಿಂದಲೂ ಯಾವುದೇ ಮಾಹಿತಿ ಅಥವಾ ಯಾವುದೇ ಸುಳಿವು ದೊರೆತಿಲ್ಲ. ಹೀಗಾಗಿ ಖುದ್ದಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳೇ ತನಿಖೆ ನಡೆಸಲು ಮುಂದಾಗಿದ್ದಾರೆ. ರಾಷ್ಟ್ರೀಯ ತನಿಖಾ ದಳದ ಸಂಸ್ಥೆಗಳಾದ ರಾ, ಕೇಂದ್ರೀಯ ಗುಪ್ತಚರ ಇಲಾಖೆ ಹಾಗೂ ಎನ್ಜಿಎಸ್ ಪಡೆಯ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಅವರನ್ನು ಭೇಟಿ ಮಾಡಿರುವ ಎನ್ಐಎ ಅವರಿಂದಲೂ ಇದುವರೆಗೂ ನಡೆದಿರುವ ತನಿಖೆಯ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಯುತ್ತಿದೆ. ಈ ತಂಡಕ್ಕೂ ಸಹ ಇದುವರೆಗೂ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗುತ್ತಿದೆ. ಬೆಳಗ್ಗಿನ ಜಾವದ ವೇಳೆಯಲ್ಲಿ ಜಿಲೆಟಿನ್ ಇಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಪ್ರಧಾನಿ ಸಾಗುವ ಮಾರ್ಗ ಇದಾಗಿದ್ದರೂ ಆ ಮಾರ್ಗದಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಕೆಯಾಗಿಲ್ಲ ಎಂದು ಹೇಳಲಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕೇಂದ್ರದ ಅಧಿಕಾರಿಗಳು ಮುಂದಾಗಿದ್ದಾರೆ.



