ಬೆಂಗಳೂರು: ಹಲವು ಸುತ್ತಿನ ಮ್ಯಾರಥಾನ್ ಸಭೆಗಳು ಮತ್ತು ತೀವ್ರ ಕಸರತ್ತಿನ ಬಳಿಕ ಅಂತಿಮವಾಗಿ ಕರ್ನಾಟಕದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಪ್ರಮುಖವಾಗಿ ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆಯ ಜವಾಬ್ದಾರಿ ಸಿಕ್ಕಿದ್ದರೆ, ಪ್ರಭಾವಿ ನಾಯಕ ಜಮೀರ್ ಅಹ್ಮದ್ ಖಾನ್ ಅವರಿಗೆ ಹೌಸಿಂಗ್ ಮತ್ತು ವಕ್ಫ್ ಖಾತೆಗಳನ್ನು ನೀಡಲಾಗಿದೆ.ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಇಲಾಖೆಯನ್ನು ನಿರ್ವಹಿಸಿದ್ದ ಮುನಿಯಪ್ಪ ಅವರಿಗೆ ಈ ಬಾರಿ ಅವರು ಪಟ್ಟು ಹಿಡಿದಂತೆ ಪ್ರಮುಖವಾದ ಸಮಾಜ ಕಲ್ಯಾಣ ಸಚಿವಾಲಯವನ್ನು ಒಲಿದುಬಂದಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಒಟ್ಟು 19 ಮಂದಿ ಶಾಸಕರ ಪೈಕಿ ಸದ್ಯ ಮೊದಲ ಹಂತದಲ್ಲಿ 13 ಜನರಿಗೆ ಮಾತ್ರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಉಳಿದ 6 ಮಂದಿ ಸಚಿವರಿಗೆ ಇನ್ನೂ ಖಾತೆಗಳ ಹಂಚಿಕೆ ಬಾಕಿ ಉಳಿದಿದೆ. ಸಚಿವರಿಗೆ ಖಾತೆ ಹಂಚಿಕೆಯ ಸಂಪೂರ್ಣ ಕರಡು ಅಂತಿಮಗೊಂಡ ಬೆನ್ನಲ್ಲೇ, ಅಧಿಕೃತ ಪಟ್ಟಿಯನ್ನು ರಾಜ್ಯಪಾಲರ ಅನುಮೋದನೆಗಾಗಿ ಲೋಕಭವನಕ್ಕೆ (ರಾಜಭವನ) ಕಳುಹಿಸಿಕೊಡಲು ಸಿದ್ಧತೆ ನಡೆಸಲಾಗಿದೆ.ಖಾತೆ ಹಂಚಿಕೆಯ ಅಧಿಕೃತ ಪಟ್ಟಿಯಂತೆ, ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆ, ರಿಜ್ವಾನ್ ಅರ್ಷದ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಸಚಿವಾಲಯ ಹಾಗೂ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಖಾತೆಯ ಜವಾಬ್ದಾರಿ ನೀಡಲಾಗಿದೆ. ಹಾಗೆಯೇ, ಬಸಂತಪ್ಪ ಅವರಿಗೆ ಮೀನುಗಾರಿಕೆ ಖಾತೆ, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಹಾಗೂ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಹೌಸಿಂಗ್ ಮತ್ತು ವಕ್ಫ್ ಖಾತೆಗಳ ಅಧಿಕಾರ ವಹಿಸಲಾಗಿದೆ. ಇದರೊಂದಿಗೆ ಲಕ್ಷ÷್ಮಣ ಸವದಿ ಅವರಿಗೆ ಸಹಕಾರಿ ಖಾತೆ, ಡಾ. ಅಜಯ್ ಸಿಂಗ್ ಅವರಿಗೆ ಅರಣ್ಯ ಖಾತೆ, ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ, ಎನ್.ಎಚ್. ಬಾಲಕೃಷ್ಣ ಅವರಿಗೆ ಸಣ್ಣ ನೀರಾವರಿ ಹಾಗೂ ಎಚ್.ಸಿ. ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನೆ ಖಾತೆ ಹಂಚಿಕೆ ಮಾಡಲಾಗಿದೆ. ಉಳಿದ ಆರು ಮಂದಿ ಸಚಿವರಿಗೆ ಯಾವ ಖಾತೆಗಳು ದೊರೆಯಲಿವೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.