ಬೆಂಗಳೂರು; ಕಳೆದ 10 ದಿನಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಹೋ ರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಠ ಬಿಟ್ಟು ತಮ್ಮ ಮೇಲೆ ವಿಶ್ವಾಸ ವಿಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದ್ದಾರೆ. ಜಪಾನ್ ಪ್ರವಾಸದಿಂದ ಹಿಂತಿರುಗಿರುವ ಅವರು ಇಂದು ಸಂವಿಧಾನ ದಿನಾಚರಣೆ ಅಂಗವಾಗಿ ವಿಧಾನಸೌಧದ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ನಾವು ಸಿದ್ದರಿದ್ದೇವೆ. ಅವರು ಈ ರೀತಿ ನಮ್ಮ ಮನವಿಗೆ ಸ್ಪಂದಿಸದೆ ಹಠ ಹಿಡಿದು ಹೋರಾಟ ಮುಂದುವರಿಸುವುದು ಹಾಗೂ ಬೆದರಿಸುವುದು ಸರಿಯಾದ ಕ್ರಮವಲ್ಲ. ನಾನು ಮತ್ತೊಮ್ಮೆ ನಮ್ಮ ತಾಯಂದಿರು ಮತ್ತು ಸಿಸ್ರ್ಸ್ಗೆ ಹೋರಾಟ ಕೈಬಿಡಿ ಎಂದು ಮನವಿ ಮಾಡುತ್ತೇನೆ ಎಂದರು. ನಾನು ನಮ್ರತೆಯಿಂದ ಮನವಿ ಮಾಡುತ್ತೇನೆ. ಬೆದರಿಕೆ ಹಾಕುವುದು ಸರಿಯಲ್ಲ. ಇಂದು ಸಂಜೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಾಳೆ ಧರಣಿನಿರತರೊಂದಿಗೆ ಮಾತನಾಡುತ್ತೇನೆ. ಎಲ್ಲರೂ ನನಗೆ ಬೇಕಾಗಿದ್ದಾರೆ. ಎಲ್ಲರ ಬದುಕನ್ನು ನೋಡಬೇಕಲ್ವ ಎಂದು ಪ್ರಶ್ನಿಸಿರುವ ಅವರು, ಹೋರಾಟದ ಸ್ಥಳಕ್ಕೆ ಬಂದು ಮಾತನಾಡುವ ರಾಜಕಾರಣಿಗಳು ಕೇಂದ್ರ ಸರ್ಕಾರದ ಮೇಲೆ ಯಾಕೆ ಒತ್ತಡ ತರುತ್ತಿಲ್ಲ ಎಂದಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರ ಅಸ್ಥಿತ್ವದಲ್ಲಿದ್ದಾಗ ಏನು ಆಗಿತ್ತೋ ಅದೇ ಇದೆ. ಅವರ ಮೇಲೆ ಏಕೆ ಒತ್ತಡ ತರುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿಯವರು ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ನಾನು ಮತ್ತೊಮ್ಮೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹೋರಾಟ ಕೈಬಿಡಿ ನಿಮ್ಮ ಬೇಡಿಕೆ ಈಡೇರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.