ಮೈಸೂರು: ವೈಮನಸ್ಸು ಮರೆತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್.ಸಿ. ಮಹದೇವಪ್ಪ ಭೇಟಿಯಾಗಿದ್ದಾರೆ. ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದು, ನಾನು ನಿಮ್ಮ ವಿರೋಧಿ ಅಲ್ಲ ಸರ್ ಎಂದು ಈ ವೇಳೆ ಮಾಜಿ ಸಿಎಂಗೆ ಮಹಾದೇವಪ್ಪ ತಿಳಿಸಿದ್ದಾರೆ. ನಿಮ್ಮ ಜೊತೆ ತಾನು ಕಳೆದ 40 ವರ್ಷದಿಂದ ಇದ್ದೇನೆ. ಸಚಿವ ಸಂಪುಟ ಪುನಾರಚನೆ ವೇಳೆ ನನ್ನ ನಡೆಸಿಕೊಂಡ ರೀತಿ ಸರಿಯಿಲ್ಲ. ನಾನು ನಿಮ್ಮ ಆಪ್ತನಾಗಿದ್ದರೂ ಇತರರಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ ಎಂದವರು ಬೇಸರ ಹೊರಹಾಕಿದ್ದಾರೆ. ನೀವು ಮುಖ್ಯಮಂತ್ರಿ ಅಲ್ಲದೇ ಇರುವಾಗ ನಾನು ಮಂತ್ರಿ ಆಗಬೇಕು ಎಂದು ಇರಲಿಲ್ಲ. ಆದರೆ ನನ್ನ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವೇಳೆ ನಿಮ್ಮ ಹೆಸರನ್ನು ಮೊದಲ ಪಟ್ಟಿಯಲ್ಲಿ ಕೊಟ್ಟಿದ್ದೆ. ಆದರೆ ಹೈಕಮಾಂಡ್ ನಿಮ್ಮ ಹೆಸರು ಪರಿಗಣಿಸಿಲ್ಲ. ರಾಜಕಾರಣದಲ್ಲಿ ಕೆಲವೊಮ್ಮೆ ವ್ಯತ್ಯಾಸ ಬರುವುದು ಸಹಜ. ನಾನು ಮುಖ್ಯಮಂತ್ರಿ ಆಗಿದ್ದರೆ ನೀವು ಮಂತ್ರಿ ಆಗಿರುತ್ತಿದ್ರಿ ಅಲ್ವಾ? ನನ್ನನ್ನೇ ಸಿಎಂ ಹುದ್ದೆಯಿಂದ ಇಳಿಸಿದ್ದಾರೆ ಅಲ್ವಾ? ಎಂದು ಸಿದ್ದರಾಮಯ್ಯ ಮಹದೇವಪ್ಪನವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ನಿಮ್ಮ ಸಹೋದರನಂತೆ. ರಾಜಕೀಯ ಹೊರತಾಗಿ ನಿಮ್ಮ ಜೊತೆಗಿನ ಸಂಬಂಧ ಮುಖ್ಯ. ಹಳೇದೆಲ್ಲ ಬದಿಗಿಟ್ಟು ಹೊಸ ರಾಜಕಾರಣ ಮಾಡೋಣ ಸರ್?