ಕೋಲಾರ: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಲು ತೀರ್ಮಾನಿಸಿದ್ದು, ಪಟ್ಟಣ ಪಂಚಾಯಿತಿಗಳಿಗೆ 10ರಿಂದ 15 ಕೋಟಿ, ಪುರಸಭೆಗಳಿಗೆ 20 ಕೋಟಿ ರೂ. ಹಾಗೂ ನಗರಸಭೆಗಳಿಗೆ 30 ಕೋಟಿ ರೂ. ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಘೋಷಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೋಲಾರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆಯಲ್ಲಿ ಮಾತನಾಡಿದ ಅವರು, ಈ ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಮಾತನಾಡಿದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು, ಸರ್ಕಾರದಿಂದ 40 ಕೋಟಿ ವಿಶೇಷ ಅನುದಾನ ತಂದರೂ ಎಸ್ಟಿಮೇಟ್ ಮತ್ತು ಟೆಂಡರ್ ಅನುಮೋದನೆಗಾಗಿ ಬೆಂಗಳೂರಿನ ಕಚೇರಿಗಳಿಗೆ ಒಂದೂವರೆ ವಷÀðದಿಂದ ಅಲೆಯುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಇನ್ಮುಂದೆ ಅನುದಾನದ ಕ್ರಿಯಾ ಯೋಜನೆ, ಎಸ್ಟಿಮೇಟ್ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಬೆಂಗಳೂರಿಗೆ ಕಳುಹಿಸುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗಳ ಮಟ್ಟದಲ್ಲೇ ಕಾರ್ಯಪಾಲಕ ಎಂಜಿನಿಯರ್‌ಗಳ ಮೂಲಕ ಎಸ್ಟಿಮೇಟ್ ಸಿದ್ಧಪಡಿಸಿ, ಟೆಂಡರ್ ಅಂತಿಮಗೊಳಿಸಲು ಅಧಿಕಾರ ನೀಡಲಾಗುವುದು ಎಂದರು. ಸ್ಥಳೀಯ ಸಂಸ್ಥೆಗಳಲ್ಲಿ ಎಂಜಿನಿಯರ್‌ಗಳ ಕೊರತೆ ಇದ್ದಲ್ಲಿ, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಎಂಜಿನಿಯರ್‌ಗಳ ನೆರವು ಪಡೆದು ತ್ವರಿತವಾಗಿ ಕಾಮಗಾರಿ ಆರಂಭಿಸುವAತೆ ನಿರ್ದೇಶಿಸಿದರು.ಕೇಂದ್ರ ಸರ್ಕಾರದ ಶೇ. 25, ಸ್ಥಳೀಯ ಸಂಸ್ಥೆಗಳ ಶೇ. 25 ಹಾಗೂ ಶೇ. 50 ರಷ್ಟು ಸಾಲದ ರೂಪದಲ್ಲಿ ಸಿಗುವ ‘ಅರ್ಬನ್ ಚಾಲೆಂಜ್ ಫಂಡ್’ (ಯುಸಿಎಫ್) ಯೋಜನೆಯನ್ನು ಆದಾಯ ತರುವ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ಕೋಲಾರ ನಗರಸಭೆಯಿಂದ 41 ಕೋಟಿ (ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ), ಕೆಜಿಎಫ್ (ರಾಬರ್ಟಸನ್‌ಪೇಟೆ) 48 ಕೋಟಿ, ಮಾಲೂರು 30 ಕೋಟಿ ಹಾಗೂ ವೇಮಗಲ್ ಪಟ್ಟಣ ಪಂಚಾಯಿತಿಯಿAದ 10 ಕೋಟಿ ಮೊತ್ತದ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಿಂಗಾರು ಮಳೆ ವೈಫಲ್ಯದಿಂದ ಫೆಬ್ರವರಿ ಅಂತ್ಯದ ನಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸಭೆಯ ಗಮನಕ್ಕೆ ತಂದರು. ಕೋಲಾರ, ಮಾಲೂರು ಮತ್ತು ಬಂಗಾರಪೇಟೆಗೆ ನೀರು ಪೂರೈಸುವ 500 ಎಂಸಿಎಫ್‌ಟಿ ಸಾಮರ್ಥ್ಯದ ಯರಗೋಳ್ ಜಲಾಶಯದಲ್ಲಿ ಸದ್ಯ 130 ಎಂಸಿಎಫ್‌ಟಿ ನೀರು ಮಾತ್ರ ಲಭ್ಯವಿದ್ದು, ಇನ್ನೂ 2-3 ತಿಂಗಳಿಗೆ ಮಾತ್ರ ಸಾಕಾಗಲಿದೆ. ಜಲಾಶಯದ ನಿರ್ವಹಣೆಗೆ ವಾರ್ಷಿಕ 9 ಕೋಟಿ ವಿಶೇಷÀ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಯರಗೋಳ್ ನಿರ್ವಹಣೆಗೆ ವಿಶೇಷÀ ಗಮನ ಹರಿಸಲಾಗುವುದು ಎಂದರು. ಅಲ್ಲದೆ, ಬೇಸಿಗೆಯಲ್ಲಿ ಬೋರ್‌ವೆಲ್‌ಗಳು ವಿಫಲವಾದರೆ ತಕ್ಷಣವೇ ಹೊಸ ಬೋರ್‌ವೆಲ್ ಕೊರೆಯಲು ಹಾಗೂ ಪಂಪ್-ಮೋಟಾರ್ ಅಳವಡಿಸಲು ಪ್ಯಾನೆಲ್ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು ಕೆಸಿ ವ್ಯಾಲಿಯಿಂದ ಬರಬೇಕಿದ್ದ 420 ಎಂಎಲ್‌ಡಿ ನೀರಿನ ಬದಲು ಸದ್ಯ 340 ಎಂಎಲ್‌ಡಿ ನೀರು ಹರಿಯುತ್ತಿದ್ದು, ಕೆರೆಗಳು ಶೇ. 20 ರಿಂದ 33 ರಷ್ಟು ಮಾತ್ರ ತುಂಬಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಕೆಜಿಎಫ್ ನಗರಕ್ಕೆ ಬ್ರಿಟಿಷ್ ಕಾಲದ ಬೇತಮಂಗಲ (348 ಎಂಸಿಎಫ್‌ಟಿ) ಹಾಗೂ ರಾಮಸಾಗರ ಕೆರೆಗಳಿಂದ ನೀರು ಪೂರೈಕೆಯಾಗುತ್ತಿದ್ದು, ಹಳೆಯ ಶುದ್ಧೀಕರಣ ಘಟಕದ ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೋಲಾರ ನಗರದಲ್ಲಿ 60 ಕೋಟಿ ವೆಚ್ಚದ ಯುಜಿಡಿ ಕಾಮಗಾರಿ, ಮಾಲೂರಿನಲ್ಲಿ 33 ಕೋಟಿ ವೆಚ್ಚದ ಅಮೃತ್ 2.0 ಕುಡಿಯುವ ನೀರಿನ ಯೋಜನೆ (ಶೇ.55 ಪ್ರಗತಿ) ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಕೆ.ಯು.ಐ.ಡಿ.ಎಫ್.ಸಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾಲೂರಿನಲ್ಲಿ ಪೈಪ್‌ಲೈನ್ ಕಾಮಗಾರಿ ವಿಳಂಬದಿAದ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಶಾಸಕ ಕೆ.ವೈ. ನಂಜೇಗೌಡ ದೂರಿದರು. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ಕೇವಲ ನೋಟಿಸ್ ನೀಡದೆ, ಗುತ್ತಿಗೆ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ಸಚಿವರು ಆದೇಶಿಸಿದರು.ಕೋಲಾರ ನಗರದ ಉಳಿದ ಶೇ. 50 ರಷ್ಟ್ಟು ಭಾಗಕ್ಕೆ ಕುಡಿಯುವ ನೀರು ಪೂರೈಸಲು 110 ಕೋಟಿ ವೆಚ್ಚದ ಡಿಪಿಆರ್ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಎನ್‌ಜಿಟಿ ಅನುದಾನದಡಿ ಕೋಲಾರಕ್ಕೆ 60 ಕೋಟಿ, ಕೆಜಿಎಫ್‌ಗೆ 20 ಕೋಟಿ, ಬಂಗಾರಪೇಟೆಗೆ 12 ಕೋಟಿ, ಮುಳಬಾಗಿಲಿಗೆ 4 ಕೋಟಿ, ಮಾಲೂರಿಗೆ 2.74 ಕೋಟಿ ಹಾಗೂ ಶ್ರೀನಿವಾಸಪುರಕ್ಕೆ 1.41 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ ಮತ್ತು ಯುಜಿಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಯಿತು. ಇದೇ ವೇಳೆ, ಮುಳಬಾಗಿಲಿನಲ್ಲಿ 2014-15ನೇ ಸಾಲಿನ 27 ಕೋಟಿ ಯೋಜನೆಯಡಿ ಕೊರೆಯಲಾದ 80 ಬೋರ್‌ವೆಲ್‌ಗಳು ಮತ್ತು ಪಂಪ್‌ಮೋಟಾರುಗಳ ಸ್ಥಿತಿಗತಿ ಬಗ್ಗೆ ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಆದೇಶಿಸಿದರು.ಬಂಗಾರಪೇಟೆಯಲ್ಲಿ ಮಂಜೂರಾದ 236 ಹುದ್ದೆಗಳ ಪೈಕಿ 154 ಸಿಬ್ಬಂದಿ ಮಾತ್ರ ಇದ್ದು, ಆರೋಗ್ಯ ನಿರೀಕ್ಷಕರು, ಎಇಇ ಹಾಗೂ ಕಂದಾಯ ಅಧಿಕಾರಿಗಳಿಲ್ಲದೆ ಆಡಳಿತಕ್ಕೆ ತೊಂದರೆಯಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಗಮನ ಸೆಳೆದರು. ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ಪರಿಸ್ಥಿತಿ ಇರುವುದನ್ನು ಗಮನಿಸಿದ ಸಚಿವರು, ಬೇರೆ ಇಲಾಖೆಗಳಿಗೆ ಹಾಗೂ ಬಿಬಿಎಂಪಿಗೆ ನಿಯೋಜನೆಗೊಂಡಿರುವ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯನ್ನು ಯಾವುದೇ ಒತ್ತಡಕ್ಕೆ ಮಣಿಯದೆ ವಾಪಸ್ ಕರೆಸಿಕೊಂಡು, 15 ದಿನಗಳಿಂದ ಒಂದು ತಿಂಗಳೊಳಗೆ ಖಾಲಿ ಹುದ್ದೆಗಳಿಗೆ ನಿಯೋಜಿಸುವಂತೆ ಪೌರಾಡಳಿತ ನಿರ್ದೇಶನಾಲಯದ (ಡಿಎಂಎ) ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಗಳಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲು ಇನ್ಮುಂದೆ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಪ್ರತಿದಿನ ಬೆಳಿಗ್ಗೆ 6 ರಿಂದ 9 ಗಂಟೆವರೆಗೆ ಕಡ್ಡಾಯವಾಗಿ ವಾರ್ಡ್ಗಳಲ್ಲಿ ಸಂಚರಿಸಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು. ಅಧಿಕಾರಿಗಳು ಮೂಲಸ್ಥಳದಲ್ಲೇ ವಾಸವಿದ್ದು, ಪ್ರತಿದಿನ ವಾಟ್ಸಾಪ್ ಮೂಲಕ ವರದಿ ಸಲ್ಲಿಸಬೇಕು. ತಾವೂ ಸಹ ಬೆಳಿಗ್ಗೆ 6 ಗಂಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವುದಾಗಿ ಎಚ್ಚರಿಸಿದರು.ಕೋಲಾರದಲ್ಲಿ ನಿತ್ಯ 65 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಎಂಆರ್‌ಎಫ್ ಘಟಕ ಶೇ. 75 ಪೂರ್ಣಗೊಂಡಿದೆ. ಆದರೆ, 45 ಸಾವಿರ ಟನ್ ಹಳೆ ಕಸ (ಲೆಗೆಸಿ ವೇಸ್ಟ್) ವಿಲೇವಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್ ಅಂತ್ಯದೊಳಗೆ ಸ್ವಚ್ಛ ಭಾರತ್ ಮಿಷನ್ ಅನುದಾನ ಬಳಸಿ ಕೆಲಸ ಮುಗಿಸದಿದ್ದರೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು. ಕಸ ಸಂಗ್ರಹಣೆಗೆ ಅಗತ್ಯವಿರುವ ಹೊಸ ವಾಹನಗಳ ಪಟ್ಟಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಎಲ್‌ಇಡಿ ಬೀದಿದೀಪ (ಸಿಸಿಎಂಎಸ್) ಯೋಜನೆ ಸಮರ್ಪಕವಾಗಿ ಜಾರಿಯಾಗದೆ ಸಂಪೂರ್ಣ ವಿಫಲವಾಗಿದೆ. ಕಂಟ್ರೋಲ್ ರೂಂ ಸಿಬ್ಬಂದಿ ಇಲ್ಲದೆ, ಸ್ಮಾರ್ಟ್ ಮೀಟರ್ ಅಳವಡಿಸದೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದು, ಅವರಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸಭೆಗೆ ಮಾಹಿತಿ ನೀಡಿದರು. ಈ ಕುರಿತ ತನಿಖಾ ವರದಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಡಿಎಂಎಗೆ ಸೂಚಿಸಿದರು.ನಗರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಹಾಗೂ ಪ್ರತಿ 12 ವಷÀðಗಳಿಗೊಮ್ಮೆ ಕಡ್ಡಾಯ ಹರಾಜು ನಡೆಸುವ ಹೊಸ ನೀತಿಯನ್ನು (ಎಸ್‌ಒಪಿ) ಒಂದು ತಿಂಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಚಿವರು ಆದೇಶಿಸಿದರು. ಇ-ಖಾತಾ ಹಾಗೂ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ‘ದಾಖಲೆ ಲಭ್ಯವಿಲ್ಲ’ ಎಂಬ ನೆಪವೊಡ್ಡಿ ಅನಗತ್ಯವಾಗಿ ತಿರಸ್ಕರಿಸದೆ, ಅಧಿಕಾರಿಗಳೇ ದಾಖಲೆ ಹುಡುಕಿ ಜನರಿಗೆ ನೆರವಾಗುವಂತೆ ಸೂಚಿಸಲಾಯಿತು.ಕೆಜಿಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಎಂ.ಜಿ. ಮಾರ್ಕೆಟ್ ವಾಣಿಜ್ಯ ಸಂಕೀರ್ಣ ನಿರ್ಮಾಣ, ಬಿಇಎಂಎಲ್ ಸಂಸ್ಥೆಯಿAದ 20 ವಷÀðಗಳಿಂದ ಬಾಕಿ ಇರುವ 8-9 ಕೋಟಿ ಆಸ್ತಿ ತೆರಿಗೆಯ ಒನ್-ಟೈಮ್ ಸೆಟ್ಲ್ಮೆಂಟ್, ಎಸ್‌ಟಿಪಿ ಸಂಪರ್ಕ ರಸ್ತೆ ಹಾಗೂ ?10 ಕೋಟಿ ಸಿಎಂಐಡಿಪಿ ರಸ್ತೆ ಕಾಮಗಾರಿಗಳ
ವಿಳಂಬದ ಬಗ್ಗೆ ಪ್ರಸ್ತಾಪಿಸಿದರು. ಡಾಂಬರು ದರ ಹೆಚ್ಚಳದಿಂದ ಗುತ್ತಿಗೆದಾರರು ಹಿಂದೇಟು ಹಾಕುತ್ತಿರುವ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಮರು ಟೆಂಡರ್ ಕರೆಯುವಂತೆ ಹಾಗೂ ಡಿಎಂಎ ಅಧಿಕಾರಿಗಳು ಖುದ್ದು ಕೆಜಿಎಫ್‌ಗೆ ಭೇಟಿ ನೀಡಿ 15 ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರು ಆದೇಶಿಸಿದರು.ಸಭೆಯ ಅಂತ್ಯದಲ್ಲಿ ಕೋಲಾರ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಅವರು ನಗರದ ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಕಸವಿಲೇವಾರಿಗೆ 30 ವರ್ಷ ಹಳೆಯ ವಾಹನ ಬಳಕೆ, ನಕಲಿ ಮರಣ ಪ್ರಮಾಣಪತ್ರ ವಿತರಣೆ ಹಾಗೂ 4,000 ಮೌಲ್ಯದ ಕ್ಯಾಮೆರಾಗೆ 1.70 ಲಕ್ಷ ಬಿಲ್ ಮಾಡಿರುವ ಅವ್ಯವಹಾರದ ಕುರಿತು ಕೋಲಾರ ಪೌರಾಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ, ಕೋಲಾರ ನಗರದ 1.55 ಕಿ.ಮೀ ಮುಖ್ಯ ರಸ್ತೆಯ ಸೌಂದರ್ಯೀಕರಣಕ್ಕೆ 5.22 ಕೋಟಿ ಅಂದಾಜು ಪಟ್ಟಿ ಸಲ್ಲಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಶಾಸಕರಿಗೆ ಗೌರವ ಬರುವ ರೀತಿಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು; ಮೂರು ತಿಂಗಳ ನಂತರ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಸಭೆಯಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಎಂ. ಶಶಿಧರ್, ವಿಧಾನ ಪರಿಷÀತ್ ಸದಸ್ಯ ಅನಿಲ್ ಕುಮಾರ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎಲ್ ರವೀಂದ್ರ, ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.