ಕೋಲಾರ: ತಂದೆ-ತಾಯಿಯೇ ಪ್ರತಿಯೊಬ್ಬರ ಜೀವನದ ಮೊದಲ ಹೀರೋಗಳು. ಆದರೆ ದೇಶ ಮತ್ತು ಸಮಾಜಕ್ಕಾಗಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುವ ಮನೋಭಾವವೂ ಬೆಳೆಸಿಕೊಳ್ಳಬೇಕು. ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಹಾಗೂ ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ವಿಚಾರಗಳು ಮತ್ತು ಆದರ್ಶಗಳ ಆಧಾರದಲ್ಲಿಯೇ ದೇಶ ಮುನ್ನಡೆಯುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ನಗರದ ಹೊರವಲಯದಲ್ಲಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜದ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನ ದೇಶದ ಮಾರ್ಗದರ್ಶಕ ಶಕ್ತಿಗಳಾಗಿವೆ. ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಇಂತಹ ಮಹನೀಯರೇ ನಮ್ಮ ನಿಜವಾದ ಹೀರೋಗಳಾಗಬೇಕು ಎಂದರು.ಸಮಾಜದಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡಬೇಕು. ನಾಲ್ಕು ಜನರಿಗೆ ಒಳ್ಳೆಯದನ್ನು ಹೇಳಿ, ಒಳ್ಳೆಯದು ಮಾಡುವುದರ ಜೊತೆಗೆ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ದೊರೆಯುವಂತೆ ಬದುಕಬೇಕು. ನಾವು ಬದುಕಿ ಹೋದ ಬಳಿಕವೂ ಸಮಾಜ ನಮ್ಮನ್ನು ಒಳ್ಳೆಯ ಕಾರ್ಯಗಳಿಗಾಗಿ ಸ್ಮರಿಸುವಂತಾಗಬೇಕು ಎಂದು ಹೇಳಿದರು.ವಕ್ಕಲೇರಿಯಲ್ಲಿ ಇರುವ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸುವ ಬೇಡಿಕೆಗೆ ಸಂಬAಧಿಸಿದಂತೆ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ದಿಕ್ಕು ತೋರಿಸಿದ ದೇವರಾಜ ಅರಸು, ಹಾವನೂರು ಸೇರಿದಂತೆ ಅನೇಕ ಮಹನೀಯರ ಕೊಡುಗೆಯನ್ನು ಸ್ಮರಿಸಬೇಕು. ಡಾ. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಹಾಗೂ ಬಾಬು ಜಗಜೀವನ್ ರಾಮ್ ಅವರಂತಹ ನಾಯಕರು ಶೋಷಿತ ಮತ್ತು ಅವಕಾಶವಂಚಿತ ಸಮುದಾಯಗಳಿಗೆ ಧ್ವನಿಯಾಗಿದ್ದಾರೆ ಎಂದರು.ಚುನಾವಣೆಗಳು ಬಂದಾಗ ಕೆಲವರು ಮಹನೀಯರ ಬಗ್ಗೆ ಹೆಚ್ಚಿನ ಪ್ರೀತಿ ತೋರಿಸುವುದು, ಜಯಂತಿಗಳನ್ನು ವಿಜೃಂಭಣೆಯಿAದ ಆಚರಿಸುವುದು ಸಾಮಾನ್ಯವಾಗಿದೆ. ಆದರೆ ಸಮುದಾಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುವವರನ್ನು ಗುರುತಿಸಬೇಕು. ಸಮುದಾಯದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವಾಗಿದೆ. ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ಅನೇಕ ಕಷ್ಟಗಳನ್ನು ಎದುರಿಸಿದ್ದರು. ಇಂದು ಮೀಸಲಾತಿ ಸೇರಿದಂತೆ ಹಲವು ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಯುವಜನರು ಉನ್ನತ ಶಿಕ್ಷಣ ಪಡೆಯಬೇಕು. ಶಿಕ್ಷಣದ ಮೂಲಕ ಸಂಘಟಿತರಾಗಿ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷ ಎನ್. ಅಂಬರೀಷ್ ಪ್ರಾಸ್ತಾವಿಕವಾಗಿ ಮಾತನಾಡಿ, ವಾಲ್ಮೀಕಿ ಸಮುದಾಯವು ಧೈರ್ಯ, ಭಕ್ತಿ ಮತ್ತು ಹೋರಾಟದ ಪರಂಪರೆಗೆ ಹೆಸರಾಗಿದೆ. ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ರಾಮಾಯಣದ ಮೌಲ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಸಮುದಾಯದ ಬಗ್ಗೆ ಅಪಪ್ರಚಾರ ಮಾಡುವ ಪ್ರಯತ್ನಗಳಿದ್ದರೆ ಅವುಗಳಿಗೆ ತಕ್ಕ ಉತ್ತರ ನೀಡಲು ಜನರು ಜಾಗೃತರಾಗಬೇಕು ಎಂದರು.ಸಮುದಾಯಕ್ಕೆ ಸಂಬAಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದರ ಜೊತೆಗೆ ಇತರ ಸಮುದಾಯಗಳೊಂದಿಗೆ ಸೌಹಾರ್ದದಿಂದ ಇರಬೇಕು. ವಕ್ಕಲೇರಿಯಲ್ಲಿ ಲಭ್ಯವಿರುವ ಒಂದು ಎಕರೆ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಪಲ್ಲಕ್ಕಿಗಳ ಮೆರವಣಿಗೆಗೆ ಶಾಸಕರು ಚಾಲನೆ ನೀಡಿದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ವಿವಿಧ ಇಲಾಖೆಗಳು ಮತ್ತು ಸಂಘಟನೆಗಳ ವತಿಯಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಪಲ್ಲಕ್ಕಿಗಳು, ಜಾನಪದ ಕಲಾತಂಡಗಳು ಹಾಗೂ ಕೃತಕ ಆನೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳನ್ನು ಹೊತ್ತು ಸಾಗಿದರು ಸಮುದಾಯದ ವಿಧ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರವು ನಡೆಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಹನೀಫ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮೈಲಾರಪ್ಪ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಿ.ಪಿ.ಎಸ್. ಮುನಿರಾಜು, ಚಂದ್ರಶೇಖರ್, ಮೇಡಹಾಳ ಮುನಿಅಂಜಿನಪ್ಪ, ಶ್ರೀರಂಗ, ವಾಲ್ಮೀಕಿ ಸಮಾಜದ ಮುಖಂಡರಾದ ಬಾಲಗೋವಿಂದ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಮಂಜುಳಾ ಶ್ರೀನಿವಾಸ್, ಬೈರಂಡಹಳ್ಳಿ ನಾಗೇಶ್, ವಾಸು, ಪಿಳ್ಳಪ್ಪ, ನುಕ್ಕನಹಳ್ಳಿ ಶ್ರೀನಿವಾಸ್ ಪಾಲ್ಗೊಂಡಿದ್ದರು.