ಕೆ.ಈ.ಕಾಂತೇಶ್. ಮಾಜಿ ಡಿಸಿಎಂ ಹಾಗೂ ಹಿರಿಯ ರಾಜಕಾರಣಿ ಕೆ. ಎಸ್.ಈಶ್ವರಪ್ಪರ ಪುತ್ರ. ಈಗಾಗಲೇ ಜಿಲ್ಲಾ ಮಟ್ಟದ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಹೆಸರು ಮಾಡಿರುವ ಯುವಕ. ಕೆ.ಎಸ್. ಈಶ್ವರಪ್ಪನವರ ಏಕೈಕ ಪುತ್ರ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಯೇ ಕೆ.ಈ. ಕಾಂತೇಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಬೇಕಾಗಿತ್ತು. ಆದ್ರೆ ಕಾರಣಾಂತರಗಳಿAದ ಅದು ಕೊನೆ ಘಳಿಗೆಯಲ್ಲಿ ಮಿಸ್ ಆಗಿತ್ತು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅದು ಮಿಸ್ ಆಗಲೇಬಾರದೆಂದು ಪಣತೊಟ್ಟಿರುವ ಅವರು ಗುರಿ ಮುಟ್ಟಲು ತೆರೆಮರೆಯಲ್ಲಿ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. "ಇಂದು ಸಂಜೆ" ಗೆ ಸಿಕ್ಕಿರುವ ಮೂಲಗಳ ಮಾಹಿತಿ ಪ್ರಕಾರ ಸಂಕ್ರಾಂತಿ ಬಳಿಕ ಕೆ.ಎಸ್. ಈಶ್ವರಪ್ಪ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಈಶ್ವರಪ್ಪ ಒಂದು ಬಾರಿ ಬಿಜೆಪಿಯ ಮನೆಯೊಳಗೆ ಬರುತ್ತಿದ್ದಂತೆ, ಕೆ.ಈ. ಕಾಂತೇಶ್‌ಗೂ ಸಹ ರಾಜಕೀಯವಾಗಿ ಭವಿಷ್ಯ ರೂಪಿಸುವುದು ನಿಶ್ಚಿತ ಎನ್ನಲಾಗಿದ್ದು, ಅದಕ್ಜಾಗಿ ಹೊಸದೊಂದು ಪ್ಲಾನ್ ರೆಡಿಯಾಗಿದೆ ಎಂಬ ಮಾತುಗಳು ಶುರುವಾಗಿದೆ. ಹಾಗಾದ್ರೆ ಏನದು ಹೊಸ ಪ್ಲಾನ್? ಅದನ್ನೇ ಇಂದಿನ ವಿಶೇಷ ವರದಿಯಲ್ಲಿ ನಾವು ಹೇಳಲು ಹೊರಟಿದ್ದೇವೆ. ಸದ್ಯ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾತ್ರ ಜೆಡಿಎಸ್‌ನ ತೆಕ್ಕೆಯಲ್ಲಿದೆ. ಇನ್ನುಳಿದಂತೆ ಶಿವಮೊಗ್ಗ ನಗರ, ತೀರ್ಥಹಳ್ಳಿ, ಶಿಕಾರಿಪುರ ಮೂರು ಕ್ಷೇತ್ರಗಳು ಬಿಜೆಪಿಯ ಶಾಸಕರುಗಳು ಪ್ರತಿನಿಧಿಸುತ್ತಿದ್ರೆ, ಇತ್ತ ಸಾಗರ, ಸೊರಬ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರಿದ್ದಾರೆ. ಹಾಲಿ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಮೊಗ್ಗ ನಗರ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಇಲ್ಲಿ ಕೆ.ಈ.ಕಾಂತೇಶ್‌ಗೆ ಅವಕಾಶಗಳು ಒಲಿಯುವುದು ಕಷ್ಟವೇ. ಇನ್ನುಳಿದ ನಾಲ್ಕು ಕ್ಷೇತ್ರಗಳಾದ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸಾಗರ ಹಾಗೂ ಸೊರಬ ಪೈಕಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್‌ನ ಶಾರದಾ ಅವರು ಇರುವುದರ ಜೊತೆಗೆ ಮೀಸಲು ಕ್ಷೇತ್ರವಾಗಿರುವ ಕಾರಣ ಅಲ್ಲಿಯೂ ಆಗುವುದಿಲ್ಲ. ಇನ್ನುಳಿದ ಸಾಗರದಲ್ಲಿ ಬಿಜೆಪಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಸ್ಫರ್ಧೆ ನಿಶ್ಚಿತ ಎನ್ನಲಾಗಿದ್ದು, ಸೊರಬ ಕುಮಾರ್ ಬಂಗಾರಪ್ಪ ಎದ್ದಿರುವ ಗೊಂದಲ ಬಗೆಹರಿಸಿಕೊಂಡು ಸ್ಪರ್ಧೆ ಮಾಡಬಹುದು ಎಂಬ ಮಾತುಗಳಿದೆ. ಇನ್ನು ಭದ್ರಾವತಿ ಕ್ಷೇತ್ರ ಮಾತ್ರ ಬಿಜೆಪಿಗೆ ಭದ್ರ ಬುನಾದಿ ಇಲ್ಲದ ಕ್ಷೇತ್ರವಾಗಿದ್ದು, ಈ ಹಿಂದಿನಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ v/s ಜೆಡಿಎಸ್ ಎಂಬ ಆಖಾಡವೇ ಇದೆ.ಈಗ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇರುವ ಕಾರಣ, ಕೆ.ಈ. ಕಾಂತೇಶ್ ಬಿಜೆಪಿಗೆ ಸೇರ್ಪಡೆಯಾಗಿ ಮುಂದಿನ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಅಂದರೆ ಎನ್‌ಡಿಎ ಅಭ್ಯರ್ಥಿಯಾಗಿ ಹಾಲಿ ಕಾಂಗ್ರೆಸ್‌ನ ಶಾಸಕ ಬಿ.ಕೆ. ಸಂಗಮೇಶ್ ವಿರುದ್ಧ ಆದೃಷ್ಟ ಪರೀಕ್ಷೆಗೆ ಇಳಿಯಬಹುದು ಎಂಬ ಮಾತುಗಳು ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯ ರಾಜಕಾರಣ ಈಗ ಕಳೆಗಟ್ಟಿದೆ.ಇತ್ತ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಶಿವಮೊಗ್ಗದಲ್ಲಿ ಬಿಜೆಪಿಯ ಚನ್ನಬಸಪ್ಪ, ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ, ಶಿಕಾರಿಪುರದಲ್ಲಿ ಬಿಜೆಪಿಯ ಬಿ.ವೈ ವಿಜಯೇಂದ್ರ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್‌ನ ಶಾರದಾ, ಸೊರಬದಲ್ಲಿ ಕಾಂಗ್ರೆಸ್‌ನ ಮಧು ಬಂಗಾರಪ್ಪ, ಸಾಗರದಲ್ಲಿ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ, ಭದ್ರಾವತಿಯಲ್ಲಿ ಕಾಂಗ್ರೆಸ್‌ನ ಬಿ. ಕೆ.ಸಂಗಮೇಶ್ ಇದ್ದಾರೆ. ಈಗ ಮುಂದಿನ ಚುನಾವಣೆಗೆ ಮೈತ್ರಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಸೇರಿದಂತೆ ಇನ್ನೊಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ಹಾಗೆಯೂ ಆಗುತ್ತದೆ. ಈಶ್ವರಪ್ಪರ ಪುತ್ರನನ್ನು ರಾಜ್ಯ ರಾಜಕಾರಣಕ್ಕೆ ಕರೆತಂದ ಹಾಗೆಯೂ ಆಗುತ್ತದೆ. ಈ ಲೆಕ್ಕಾಚಾರ ಹಾಕಿಕೊಂಡು ಕೆ.ಈ. ಕಾಂತೇಶ್ ಆದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ ಎಂಬ ಮಾತುಗಳು ಆರಂಭವಾಗಿದೆ. ಇನ್ನೊಂದು ಪ್ರಮುಖ ವಿಚಾರ ಅಂದರೆ ರಾಜಕಾರಣದಲ್ಲಿ ಕೆ.ಎಸ್ ಈಶ್ವರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರೇ. ಭದ್ರಾವತಿಯಲ್ಲಿ ಈ ಹಿಂದೆ ಜೆಡಿಎಸ್‌ನ ಅಪ್ಪಾಜಿಗೌಡ ಆಯ್ಕೆಯಾಗುತ್ತಿದ್ರು. ಅವರ ನಿಧನದ ಬಳಿಕ ಕ್ಷೇತ್ರ ಜೆಡಿಎಸ್‌ನ ತೆಕ್ಕೆಯಿಂದ ಜಾರಿ ಹೋಗಿದೆ. ಹಳೆಯ ಕ್ಷೇತ್ರ ಹಾಗೂ ಈಶ್ವರಪ್ಪರ ಜೊತೆಗಿನ ಸ್ನೇಹ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಈಗ ಕುಮಾರಸ್ವಾಮಿ ಕೂಡ ಓಕೆ ಅಂದರೆ ಕೆ.ಈ.ಕಾಂತೇಶ್, 2028 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಚರ್ಚೆಗೆ ಬಂದಿದೆ.