ರಾಜ್ಯದ ಮಾಜಿ ಉಪ- ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ ಅವರು ಸಂಕ್ರಾಂತಿ ಮುಗಿಯುತ್ತಿದ್ದಂತೆ ಅಧಿಕೃತವಾಗಿ ತಮ್ಮ ಮಾತೃ ಪಕ್ಷ ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ "ಇಂದು ಸಂಜೆ" ಗೆ ಸಿಕ್ಕಿದೆ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹೊಸ್ತಲಿನಲ್ಲಿ ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಘೋಷಿಸಿದ್ದ ಕೆ.ಎಸ್.ಈಶ್ವರಪ್ಪ, ಬದಲಾದ ಪರಿಸ್ಥಿತಿಯಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡಿದ್ರು. ಬಳಿಕ 2024 ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ಧ ಪರಾಭವಗೊಂಡಿದ್ದರು. ಇದೀಗ ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ಮಾತಿನಂತೆ, ತಮ್ಮ ಮಾತೃ ಪಕ್ಷದತ್ತ ಕೆ.ಎಸ್. ಈಶ್ವರಪ್ಪ ಮುಖ ಮಾಡಿದ್ದು ಎಲ್ಲವೂ ಅಂದುಕೊಂಡಂತೆ ಆದ್ರೆ, ಸಂಕ್ರಾಂತಿ ಮುಗಿದ ಬಳಿಕ ಅಧಿಕೃತವಾಗಿ ಕಮಲ ಪಕ್ಷಕ್ಕೆ ಅವರ ಆಗಮನವಾಗಲಿದೆ ಎಂಬ ಮಾತುಗಳು ಆರಂಭವಾಗಿದೆ.ಇತ್ತೀಚಿಗೆ ಶಿವಮೊಗ್ಗದಲ್ಲಿ ಸಂಭ್ರಮದಿಂದ ನಡೆದ ದಸರಾದ ವಿಜಯದಶಮಿಯ ದಿನ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ವಾಪಸ್ ಆಗುವ ಕುರಿತ ಮೊದಲ ಒಂದೆರಡು ವಾಕ್ಯಗಳು ಆರಂಭವಾಗಿದ್ದು, ಮುಂದಿನ ಎರಡ್ಮೂರು ತಿಂಗಳಲ್ಲಿ ಅದಕ್ಕೆ ಉತ್ತರ ಸಿಗಲಿದೆ ಎನ್ನುವ ಮಾತುಗಳು ಶುರುವಾಗಿದೆ.ವಿಜಯದಶಮಿ ದಿನ ಯಡಿಯೂರಪ್ಪ ಅವರೇ ಈಶ್ವರಪ್ಪರಿಗೆ ಬನ್ನಿ ಕೊಟ್ಟಿದ್ದು, ಬಾಳು ಬಂಗಾರವಾಗಲಿ ಎಂದು ಆಶಿಸಿದ್ದಾರೆ. ಇತ್ತ ಈಶ್ವರಪ್ಪ ಕೂಡ ಯಡಿಯೂರಪ್ಪರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವಿಚಾರ ನಡೆದ ಬಳಿಕ ಕಮಲ ಪಕ್ಷದಲ್ಲಿ ಈಶ್ವರಪ್ಪ ಆಗಮನಕ್ಕೆ ವೇದಿಕೆ ಸಜ್ಜಾಗುತ್ತಿದೆ ಎನ್ನುವ ಚರ್ಚೆಗಳು ಆರಂಭವಾಗಿದ್ದು, ಸಂಕ್ರಾAತಿ ಬಳಿಕ ಅದು ಆಗಲಿದೆ ಎನ್ನಲಾಗುತ್ತಿದೆ.ಇನ್ನು ರಾಜಕೀಯವಾಗಿ ಈಶ್ವರಪ್ಪ ಹತ್ತು ಹಲವು ಹುದ್ದೆಗಳನ್ನು ಅನುಭವಿಸಿದ್ದು, ಸದ್ಯ ಅವರ ಕೆ. ಇ.ಕಾಂತೇಶ್ ಕೂಡ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಬೇಕಿದೆ. ಹೀಗಾಗಿ, ಮಾತೃ ಪಕ್ಷದತ್ತ ಈಶ್ವರಪ್ಪ ಒಲವು ತೋರಿದ್ದಾರೆ ಎನ್ನಲಾಗಿದ್ದು, ಅತಿ ಶೀಘ್ರದಲ್ಲಿಯೇ ಹೈಕಮಾಂಡ್ ನಾಯಕರು ಈಶ್ವರಪ್ಪ ಸೇರ್ಪಡೆಗೆ ವೇದಿಕೆ ಸೃಷ್ಠಿಸಲಿದ್ದಾರೆ ಎಂಬ ಮಾತುಗಳು ಆರಂಭವಾಗಿದೆ.ಸದ್ಯ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧದ ಸ್ಟಿಂಗ್ ಆಪರೇಷನ್ ವಿಚಾರ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ಈಶ್ವರಪ್ಪ ಕೂಡ ಪ್ರಬಲ ಹಿಂದುಳಿದ ವರ್ಗಕ್ಕೆ ಸೇರದವರಾಗಿದ್ದರು, ಇಂತಹ ಸಂದರ್ಭದಲ್ಲಿ ಈಶ್ವರಪ್ಪ ಪಕ್ಷಕ್ಕೆ ಬಂದರೆ ಅದು ಆನೆ ಬಲ ಬಂದಂತಾಗುತ್ತದೆ ಎಂಬ ಚರ್ಚೆಯ ಬೆನ್ನಲ್ಲೇ ಈ ಪ್ರಕ್ರಿಯೆ ಆರಂಭಗೊಂಡಿದೆ ಎನ್ನಲಾಗಿದೆ. ಒಟ್ಟಾರೆ, ಸಂಕ್ರಾಂತಿ ಬಳಿಕ ಕೆ. ಎಸ್.ಈಶ್ವರಪ್ಪ ಈಗ ಮಾತೃ ಪಕ್ಷದತ್ತ ಆಗಮಿಸಲು ಕಾಲ ಸನ್ನಿಹಿತವಾಗಿದ್ದು, ಘರ್ ವಾಪ್ಸಿ ಎಷ್ಟರಮಟ್ಟಿಗೆ ಬಿಜೆಪಿ ಪಾಲಿಗೆ ಆದೃಷ್ಟ ತಂದು ಕೊಡಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.