LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಕ್ರಷರ್ ಮಂಜೂರಾತಿ ರದ್ದುಪಡಿಸಲು ಒತ್ತಾಯ


ಕೋಲಾರ: ಕೋಲಾರ ಜಿಲ್ಲಾ ಗಣಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಹಾಗೂ ಕಲ್ಲುಕುಟಿಗರಲ್ಲದವರಿಗೆ ಬಂಡೆ, ಕೋರೆ ಮತ್ತು ಕ್ರಷರ್‌ಗಳನ್ನು ಮಂಜೂರು ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಹಾಗೂ ಪ್ರಾಮಾಣಿಕ ಕಲ್ಲುಕುಟಿಗ ಕುಟುಂಬಗಳಿಗೆ ಹಾಗೂ ಕೆಲಸಗಾರರಿಗೆ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ಪ್ರೊ. ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಿಯೋಗವು, ಕೋಲಾರ ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಿ, ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಧನ ಕಟ್ಟದೆ ಮೋಸ ಮತ್ತು ವಂಚನೆ ಮಾಡುತ್ತಿರುವ ಬಲಾಢ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಪ್ರತಿಯೊಂದು ಬಂಡೆ, ಕೋರೆ ಮತ್ತು ಕ್ರಷರ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ವಾಹನಗಳಿಗೆ ಲೋಡ್ ತುಂಬಿ ತೂಕ ಮಾಡುವ ಜಾಗದಲ್ಲಿಯೇ ಸರ್ಕಾರಕ್ಕೆ ಬರಬೇಕಾದ ರಾಯಲ್ಟಿಯನ್ನು ಆನ್‌ಲೈನ್ ಮೂಲಕ ಸ್ಥಳದಲ್ಲೇ ಕಟ್ಟಿಸಿಕೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಬೊಕ್ಕಸಕ್ಕೆ ಸೇರಲಿದ್ದು, ಯಾವುದೇ ತೂಕದ ಮೋಸಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.ಈಗಾಗಲೇ ಬಾಕಿ ಉಳಿಸಿಕೊಂಡಿರುವ ರಾಜ್ಯಧನವನ್ನು ಕೂಡಲೇ ವಸೂಲಿ ಮಾಡಬೇಕು ಹಾಗೂ ಬಾಕಿ ಪಾವತಿಸದ ಕ್ರಷರ್ ಮತ್ತು ಕೋರೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು. ಇತ್ತೀಚೆಗೆ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್‌ನಲ್ಲಿ ಮೃತಪಟ್ಟ ಸುಬೇದಾರ್ ಬ್ಯಾನರ್ಜಿ ಮತ್ತು ಬೆಟ್ಟಹೊಸಪುರ ಗ್ರಾಮದ ಲಕ್ಷ್ಮಣ್ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಿಯಮ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ, ರಾಜ್ಯಧನ ಕಟ್ಟದೆ ಮೋಸ ಮಾಡಿರುವ ಆರ್.ಎಸ್. ರಾಕ್ ಸ್ಯಾಂಡ್ ಕ್ರಷರ್ ಮಾಲೀಕರ ಮೇಲೆ 'ಸುಮೋಟೋ' ಕೇಸ್ ದಾಖಲಿಸಬೇಕು ಮತ್ತು ಅಲ್ಲಿಯವರೆಗೆ ಕ್ರಷರ್ ಬಂದ್ ಮಾಡಬೇಕು ಎಂದು ಮನವಿ ಮಾಡಿದರು.
ಕೋಲಾರ ತಾಲೂಕು ಕಚೇರಿಯಲ್ಲಿ ಕಲ್ಲುಕುಟಿಗರಲ್ಲದವರಿಗೂ ಕಲ್ಲುಕುಟಿಗ ಸರ್ಟಿಫಿಕೇಟ್ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಾಲೂರು ನಗರದ ಬಳಿ ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿರುವ ಜಾಗದಲ್ಲಿ ಅನುಮತಿಯಿಲ್ಲದೆ, ರಾಜ್ಯಧನ ಕಟ್ಟದೆ ಅಕ್ರಮವಾಗಿ ಗ್ರಾನೈಟ್ ದಿಮ್ಮೆಗಳನ್ನು ತೆಗೆದು ಸರ್ಕಾರಕ್ಕೆ ನಷ್ಟ ಉಂಟುಮಾಡಿದವರ ವಿರುದ್ಧ ಕೇಸ್ ದಾಖಲಿಸಿ, ನಷ್ಟ ಪರಿಹಾರ ವಸೂಲಿ ಮಾಡಬೇಕು. ಹಾಗೆಯೇ ಮುಳಬಾಗಿಲು ತಾಲೂಕಿನ ಆವಣಿ, ಶಾಪೂರು, ಕೀಲುಗಾಣಿ, ನಂಗಲಿ ಮುಂತಾದ ಪ್ರದೇಶಗಳಲ್ಲಿ ಅನುಮತಿಯಿಲ್ಲದೆ ನಡೆಯುತ್ತಿರುವ ಕೋರೆ, ಬಂಡೆ ಮತ್ತು ಕ್ರಷರ್‌ಗಳ ವಿರುದ್ಧ ಕ್ರಮ ಕೈಗೊಂಡು ನಷ್ಟವಾಗಿರುವ ರಾಜ್ಯಧನವನ್ನು ವಸೂಲಿ ಮಾಡಬೇಕು ಎಂದು ರೈತ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ರೈತ ಮುಖಂಡರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಕ್ಷಣವೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕೋದಂಡರಾಮಯ್ಯ ಅವರಿಗೆ ಕರೆ ಮಾಡಿ ಕಚೇರಿಗೆ ಕರೆಯಿಸಿಕೊಂಡರು. ಜಿಲ್ಲೆಯ ಎಲ್ಲಾ ಕ್ರಷರ್ ಮತ್ತು ಬಂಡೆ ಕೋರೆಗಳ ಕಡತಗಳನ್ನು ತೆಗೆದುಕೊಂಡು ಬಂದು, ಪೂರ್ಣ ಪ್ರಮಾಣದ ಪಟ್ಟಿಯನ್ನು ದಿನಾಂಕ 31ರ ಒಳಗಾಗಿ ತಮಗೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.ಅಲ್ಲದೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕು ಭೂವಿಜ್ಞಾನಿಗಳು ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು, ಒಂದು ವೇಳೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೊತ್ತಮುರಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಮುಖಂಡರಾದ ಲಕ್ಷ್ಮೀನಾರಾಯಣ ಶೆಟ್ಟಿ, ಎಲ್.ಎನ್. ಬಾಬು, ಮಡಿವಾಳ ಮುನಿರಾಜು, ವಿಶ್ವ, ಶಬೀರ್ ಅಹ್ಮದ್, ಮುನಿಯಪ್ಪ, ವೆಂಕಟರಾಜು, ಮಂಜುನಾಥ್, ಚಂದ್ರಪ್ಪ, ಅನಂತ್, ಆನಂದ್, ಅನಿಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನಕ್ಕೆ ಚಾಲನೆಆದಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ರಷರ್ ಮಂಜೂರಾತಿ ರದ್ದುಪಡಿಸಲು ಒತ್ತಾಯಹಾಲಿ ಚಾಂಪಿಯನ್ಸ್ ಆರ್‌ಸಿಬಿ ಹಿಂದಿಕ್ಕಿದ ಮುಂಬೈ- ಈಗ ವಿಶ್ವದ ಶ್ರೀಮಂತ ಫ್ರಾಂಚೈಸಿ!ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊಕನ್ನಡ ರಾಜ್ಯೋತ್ಸವ-ನಮ್ಮ ಹೆಮ್ಮೆಯ ಹಬ್ಬ -ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳುMR ಜಾಕ್ ಚಿತ್ರದ `ಆರಂಭ ವಸಂತ ಆರಂಭ' ಹಾಡು ಬಿಡುಗಡೆಇಂದಿನಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್  ಸಂಭ್ರಮ!ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಭರ್ಜರಿ ಗೆಲುವು: ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ