ಮೈಸೂರು: `ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ’ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಸಚಿವ ಕೆಎಂ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆ ಸಚಿವರ ವಿರುದ್ಧ ದೂರು ಸಲ್ಲಿಸಿದೆ. ಸಚಿವರು ಜನರಿಗೆ ನೇರವಾಗಿ ಲಂಚ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಆರೋಪಿಸಿರುವ ವಾಯ್ಸ್ ಆಫ್ ಪೀಪಲ್ ಮುಖ್ಯಸ್ಥ ವಸಂತ ರಾವ್ ಚೌಹಾಣ್, ಇಂತಹ ಹೇಳಿಕೆ ನೀಡಿರುವ ಶಿವಲಿಂಗೇಗೌಡರು ಸಚಿವ ಸ್ಥಾನದಲ್ಲಿರಲು ಅನರ್ಹರು ಎಂದು ಹೇಳಿದ್ದಾರೆ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸಾರ್ವಜನಿಕವಾಗಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.ಈ ವಿಚಾರವಾಗಿ ರಾಜ್ಯಪಾಲರಿಗೂ ದೂರು ಸಲ್ಲಿಸುವುದಾಗಿ ವಸಂತ ರಾವ್ ಚೌಹಾಣ್ ತಿಳಿಸಿದ್ದಾರೆ. ಸಚಿವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸುವುದಾಗಿಯೂ ಹೇಳಿದ್ದಾರೆ.