ಕಲಬುರಗಿ: “ಎರಡನೇ ಹಂತದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಈ ಐದೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಈ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟಿರುವ ಕೊಡುಗೆ ಬಗ್ಗೆ ಜನರಿಗೆ ಅರಿವಿದೆ. ಅವರ ಸೋಲಿಗೆ ನಾವೆಲ್ಲಾ ಪಶ್ಚಾತಾಪ ಪಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರ ಸೇವೆಗೆ ಈ ಭಾಗದ ಜನ ಉಪಕಾರ ಸ್ಮರಣೆ ಮಾಡಲಿದ್ದಾರೆ.ಶೋಷಿತ ವರ್ಗದವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಕ್ತಿ ತುಂಬಿದಂತೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಶಕ್ತಿ ನೀಡಿದ್ದಾರೆ.
ಬಾಬುರಾವ್ ಚಿಂಚನಸೂರ್, ಸವದಿ, ಮಾಲಿಕಯ್ಯ ಗುತ್ತೇದಾರ್ ಅವರು ನಮ್ಮ ಪಕ್ಷಕ್ಕೆ ಮರಳಿದ್ದಾರೆ.
ಇವರ ಜತೆಗೆ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಇನ್ನು 93% ನಷ್ಟು ಜನ ನಮ್ಮ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಮಹಿಳೆಯರಿಗೆ,ಕಾರ್ಯಕರ್ತರಿಗೆ ಚೊಂಬು ನೀಡಿದೇ. ಕಾಂಗ್ರೆಸ್ ಪಕ್ಷದ ಯೋಜನೆಗಳಿಂದ ಬದುಕು ಸಾಗಿಸಲು ನೆರವಾಗಿದೆ ಎಂದು ಮನವರಿಕೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಜನ ಬಹಳ ಉತ್ಸಾಹದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.”
ಇನ್ನು ಸುರಪುರ ಉಪಚುನಾವಣೆ ಬಗ್ಗೆ ಕೇಳಿದಾಗ, “ಕಳೆದ ಚುನಾವಣೆ ಬಳಿಕ ಬಿಜೆಪಿ ಅಭ್ಯರ್ಥಿ ತಮ್ಮ ಕಾರ್ಯಕರ್ತರಿಗೆ 2 ವರ್ಷ ನಾನು ಇರುವುದಿಲ್ಲ, ಯಾರೂ ಮನೆಕಡೆ ಬರಬೇಡಿ ಎಂದು ಹೇಳಿದ್ದರು. ಇನ್ನು ಅವರ ಕಾರ್ಯಕರ್ತರೂ ಕೂಡ ನಮ್ಮ ಪಾಲಿಕೆ ಚುನಾವಣೆ ಸಮಯದಲ್ಲಿ ಅವರೇ ನಮ್ಮ ಜೊತೆ ಇರಲಿಲ್ಲ. ಈಗ ನಾವು ಯಾಕೆ ಅವರ ಪರ ಚುನಾವಣೆ ಮಾಡಬೇಕು ಎಂದು ಸುಮ್ಮನಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಾತಾವರಣವಿದೆ” ಎಂದು ತಿಳಿಸಿದ್ದಾರೆ.