ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 16ರ ಗುರುವಾರದಂದು ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಲಯಕ್ಕೆ ಮರಳುವ ತವಕದಲ್ಲಿ ಇದೆ. ಆದರೆ ಫಾರ್ಮ್ ನಲ್ಲಿರುವ ತಂಡದ ಪ್ರಮುಖ ಬ್ಯಾಟರ್ ರೋಹಿತ್ ಶರ್ಮಾ ಅವರು ಗಾಯಗೊಂಡಿರುವ ಕಾರಣ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ.ಸೀಸನ್ ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಮುಂಬೈ ತಂಡ ಬಳಿಕ ಆಡಿದ ಮೂರು ಪಂದ್ಯಗಳಲ್ಲೂ ಪರಾಭವ ಅನುಭವಿಸಿದೆ. ಮುಖ್ಯವಾಗಿ ಪವರ್ಪ್ಲೇ ಅವಧಿಯಲ್ಲಿ ವಿಕೆಟ್ ಪಡೆಯಲು ಬೌಲರ್ಗಳು ವಿಫಲರಾಗುತ್ತಿರುವುದು ಮತ್ತು ಜಸ್ಪ್ರಿತ್ ಬುಮ್ರಾ ಅವರ ವಿಕೆಟ್ ಪಡೆಯಲು ಪರದಾಡುತ್ತಿರುವುದು ತಂಡದ ಹಿನ್ನೆಡೆಗೆ ಕಾರಣವಾರಿದೆ.ಬ್ಯಾಟಿಂಗ್ನಲ್ಲೂ ಆರಂಭಿಕ ಓವರ್ಗಳಲ್ಲಿ ರನ್ ವೇಗ ಕುಂಠಿತವಾಗುತ್ತಿರುವುದರಿಂದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಏತನ್ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರು ಮುಂದಿನೆರಡು ಪಂದ್ಯಗಳಿಗೆ ಅನುಮಾನ ಎಂದೇ ವರದಿಯಾಗಿದೆ. ಇದು ಹೌದಾಗಿದ್ದರೆ ಮುಂಬೈ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಉತ್ತಮ ಲಯದಲ್ಲಿದ್ದು ಆಡಿರುವ 4 ಪಂದ್ಯಗಳಲ್ಲಿ 3ನ್ನು ಗೆದ್ದು 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.ಹೇಗಿದೆ ಪಿಚ್?ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿರುವ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ವಿಶ್ವಪ್ರಸಿದ್ಧ. ಇನ್ನು ಟಿ20 ಗೆ ಬಂದಾಗಲAತೂ ಹೇಳಲೇ ಬೇಕಿಲ್ಲ. ಭಾರತದ ಕ್ರೀಡಾಂಗಣಗಳಲ್ಲೇ ಅತ್ಯಂತ ಕಿರಿಯ ಬೌಂಡರಿ ಹೊಂದಿರುವ ಈ ಮೈದಾನದಲ್ಲಿ ಸಿಕ್ಸರ್ ಗಳನ್ನು ನೀರು ಕುಡಿದಷ್ಟು ಸುಲಭದಲ್ಲಿ ಹೊಡೆಯಬಹುದು. ಜೊತೆಗೆ ಮೈದಾನದ ಹೊರಾಂಗಣ ಸಹ ವೇಗವಾಗಿರುವುದರಿಂದ ಬ್ಯಾಟಿಗೆ ತಗಲಿದ ಚೆಂಡು ಬೌಂಡರಿ ಗೆರೆ ದಾಟಲು ಹೆಚ್ಚು ಸಮಯ ತಗಲುವುದಿಲ್ಲ. ಐಪಿಎಲ್ 2026 ರಲ್ಲಿ ಇಲ್ಲಿ ನಡೆದಿರುವ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿಯೂ ತಂಡಗಳು 220 ರನ್ಗಳ ಗಡಿಯನ್ನು ದಾಟಿದ್ದೇ ಈ ಪಿಚ್ ನ ತಾಕತ್ತಿಗೆ ಸಾಕ್ಷಿ. ಹೀಗಾಗಿ ಗುರುವಾರವೂ ಒಂದು ಹೈ ಸ್ಕೋರಿಂಗ್ ಪುಂದ್ಯ ನಡೆಯಬಹುದು ಎಂಬ ನಿರೀಕ್ಷೆ ಇದೆ.



