ನವದೆಹಲಿ: ಮುಂಬರುವ ಮೇ 26 ರಂದು ಭಾರತವು `ಕ್ವಾಡ್’ ವಿದೇಶಾಂಗ ಸಚಿವರ ಸಭೆಯ ಆತಿಥ್ಯವನ್ನು ವಹಿಸಲಿದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷ, ಹೊರ್ಮುಜ್ ಜಲಸಂಧಿ ಮುಚ್ಚಿರುವುದು, ಈ ಬಿಕ್ಕಟ್ಟಿನಿಂದ ಜಾಗತಿಕವಾಗಿ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳು ಹಾಗೂ ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶದ ನಿರ್ಮಾಣದ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸ ಮುಗಿದ ಕೆಲವೇ ದಿನಗಳಲ್ಲಿ ಈ ಸಭೆ ನಡೆಯುತ್ತಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದರ ಆತಿಥ್ಯ ವಹಿಸಲಿದ್ದಾರೆ.
ಈ ಸಭೆಯಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಜಪಾನ್ ವಿದೇಶಾಂಗ ಸಚಿವ ತೋಷಿಮಿತ್ಸು ಮೊಟೇಗಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಭಾಗವಹಿಸಲಿದ್ದಾರೆ. ಮಾರ್ಕೊ ರೂಬಿಯೋ ಅವರು ದ್ವಿಪಕ್ಷೀಯ ಮಾತುಕತೆಗಾಗಿ ನಾಳೆಯೇ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶದ ಕ್ವಾಡ್ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಚಿವರು 2025ರ ಜುಲೈ 1 ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಚರ್ಚೆಗಳ ಮುಂದಿನ ಹಂತವನ್ನು ಇಲ್ಲಿ ಮುಂದುವರಿಸಲಿದ್ದಾರೆ. ಆದ್ಯತೆಯ ಕ್ಷೇತ್ರಗಳಲ್ಲಿ ಕ್ವಾಡ್ ಸಹಕಾರವನ್ನು ಹೆಚ್ಚಿಸುವ ಕುರಿತು ಅವರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಜೈಶಂಕರ್ ಆತಿಥ್ಯದಲ್ಲಿ ಮೇ 26 ರಂದು `ಕ್ವಾಡ್’ ವಿದೇಶಾಂಗ ಸಚಿವರ ಸಭೆ



