ಐಪಿಎಲ್ನ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಲೀಗ್ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಸಿಎಸ್ ಕೆ ತಂಡವನ್ನು 89 ರನ್ ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಂದರೆ ಹಾಲಿ ಚಾಂಪಿಯನ್ ಆರ್ ಸಿಬಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಮೂವರ ಅರ್ಧಶತಕದ ನೆರವಿನಿಂದ 229 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ 140 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್ಗೆ 12.2 ಓವರ್ಗಳಲ್ಲಿ 125 ರನ್ ಸೇರಿಸಿದರು. ಗಿಲ್ 37 ಎಸೆತಗಳಲ್ಲಿ 64 ರನ್ ಗಳಿಸಿದರೆ, ಸುದರ್ಶನ್ 53 ಎಸೆತಗಳಲ್ಲಿ 84 ರನ್ ಗಳಿಸಿ ಔಟಾದರು. ಇನ್ನಿಂಗ್ಸ್ ಅಂತ್ಯದ ವೇಳೆಗೆ, ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಒಳಗೊಂಡAತೆ ಅಜೇಯ 57 ರನ್ ಗಳಿಸಿದರು. ಈ ಮೂವರ ಅರ್ಧಶತಕದಿಂದಾಗಿ ಗುಜರಾತ್ 20 ಓವರ್ಗಳಲ್ಲಿ 229 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಸಿಎಸ್ಕೆ ಪರ ಸ್ಪೆನ್ಸರ್ ಜಾನ್ಸನ್, ಅನ್ಶುಲ್ ಕಾಂಬೋಜ್ ಮತ್ತು ಮುಖೇಶ್ ಚೌಧರಿ ತಲಾ 1 ವಿಕೆಟ್ ಪಡೆದರಾದರೂ ಯಾವುದೇ ಬೌಲರ್ ಗೆ ರನ್ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
230 ರನ್ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಆರಂಭ ಪಡೆಯಿತು. ಮೊದಲ ಓವರ್ನಲ್ಲೇ ಮೊಹಮ್ಮದ್ ಸಿರಾಜ್ ಸಂಜು ಸ್ಯಾಮ್ಸನ್ ಅವರನ್ನು 0 ರನ್ಗೆ ಔಟ್ ಮಾಡಿದರು. ನಂತರ, ರುತುರಾಜ್ ಗಾಯಕ್ವಾಡ್ ಮತ್ತು ಉರ್ವಿಲ್ ಪಟೇಲ್ ಕೂಡ ಸಿರಾಜ್ ಬೌಲಿಂಗ್ಗೆ ಬಲಿಯಾದರು. ಸಿರಾಜ್ ತನ್ನ ಮೊದಲ ಎರಡು ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿ ಸಿಎಸ್ಕೆ ಬೆನ್ನೆಲುಬನ್ನು ಮುರಿದರು. ಕಗಿಸೊ ರಬಾಡ ಮತ್ತು ರಶೀದ್ ಖಾನ್ ಕೂಡ ಅದ್ಭುತ ಬೌಲಿಂಗ್ ಮಾಡಿದರು. ರಬಾಡ ಮತ್ತು ರಶೀದ್ ಖಾನ್ ಕೂಡ ಮೂರು ವಿಕೆಟ್ಗಳನ್ನು ಪಡೆದರು.



